ಅಮಿತ್ ಷಾ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ

IMG_20241224_122507
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಚಾಮರಾಜನಗರ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ತಾಲೂಕು ಆದಿಕರ್ನಾಟಕ ಜನಾಂಗದ ಗಡಿಮನೆ ಮತ್ತು ಕಟ್ಟೆ ಮನೆಗಳ ಯಜಮಾನರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಪ್ರವಾಸಿ ಮಂದಿರ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಸಾಗಿ ಕೆಲಕಾಲ ಪ್ರತಿಭಟನೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಕೇಂದ್ರ ಬಿಜೆಪಿ ಸರ್ಕಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳು ಹಾಗೂ ಬಾವುಟಗಳನ್ನು ಹಿಡಿದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಸಂಸದ ಸುನೀಲ್ ಬೋಸ್ ಮಾತನಾಡಿ, ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಮಾನತೆಯನ್ನು ಕಲ್ಪಿಸಲು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದರೇ ನಮ್ಮ ಪಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರೇ ದೇವರಾಗಿದ್ದಾರೆ. ನಮ್ಮನ್ನು ಮತ್ತೆ ಮನುಸ್ಮತಿ ಕಾಲಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಅಮಿತ್ ಶಾ ಮತ್ತು ಬಿಜೆಪಿಯವರು ಹೊಂದಿದ್ದಾರೆ. ಇದನ್ನು ತುಳಿತಕ್ಕೆ ಒಳಗಾದ ಸಮುದಾಯದವರು ಎಂದಿಗೂ ಸಹಿಸುವುದಿಲ್ಲ ಎಂದರು.

ಶತಶತಮಾನಗಳಿಂದ ಜಾತೀಯತೆಯ ಕೂಪದಲ್ಲಿ ಸಿಲುಕಿ, ನರಕಯಾತನೆ ಅನುಭವಿಸುತ್ತಿದ್ದ ತಳಸಮುದಾಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಮೂಲಕ ಕೊಟ್ಯಾಂತರ ಜನರ ಜೀವನವನ್ನು ಸ್ವರ್ಗವಾಗಿಸಿದ್ದಾರೆ. ಅಂತಹ ಮೇರು ವ್ಯಕ್ತಿತ್ವದ ವಿರುದ್ಧ ಮಾತನಾಡುವ ಮೂಲಕ ಅಮಿತ್ ಶಾ ಅವರು ದೇಶಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಗೌರವವಿದ್ದರೇ ಕೂಡಲೇ ಗೃಹಮಂತ್ರಿ ಅಮಿತ್ ಶಾ ಅವರ ರಾಜೀನಾಮೆಯನ್ನು ಪಡೆಯಬೇಕು. ಅವರ ಸಂಸದ ಸ್ಥಾನವನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಂಗಲ, ಉಮ್ಮತ್ತೂರು, ಹರದನಹಳ್ಳಿ, ಅಮಚವಾಡಿ, ಸಿದ್ದಯ್ಯನಪುರ, ಚಂದಕವಾಡಿ, ನಾಗವಳ್ಳಿ, ಜ್ಯೋತಿಗೌಡನಪುರ, ದಡದಹಳ್ಳಿ, ಕಾಗಲವಾಡಿ, ಅಮ್ಮನಪುರ, ಹೊಂಗನೂರು, ಆಲೂರು, ರಾಮಸಮುದ್ರ ಹಾಗೂ ಇನ್ನಿತರೆ ಗ್ರಾಮಗಳ ಯಜಮಾನರು, ಕುಲಸ್ಥರು, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net