

ಚಿತ್ರದುರ್ಗ: ದೇಶಕ್ಕೆ ಭದ್ರ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಸ್ಮರಿಸಿದರೆ, ಸ್ವರ್ಗ ಪ್ರಾಪ್ತಿ ಎಂಬ ಕೇಂದ್ರದ ಗೃಹ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಎನ್.ಮೂರ್ತಿ) ಬಣದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಮೆರವಣಿಗೆ ನಡೆಸಿದರು. ಷಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿರುವ ಅಮಿತ್ ಷಾ, ಅಂಬೇಡ್ಕರ್ ಕುರಿತು ನೀಡಿದ ಕೀಳಾದ ಹೇಳಿಕೆಯನ್ನೇ ದೇಶದ ಪ್ರಧಾನಿ ಸಮರ್ಥಿಸಿಕೊಳ್ಳುವುದು ದೊಡ್ಡ ದುರಂತ. ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಸಾಮಾಜಿಕ ಬದ್ಧತೆಯುಳ್ಳ ಪ್ರತಿಯೊಬ್ಬರು ವಿರೋಧಿಸಬೇಕು ಎಂದು ಮನವಿ
ಮಾಡಿದರು.
ಜಿಲ್ಲಾ ಸಮಿತಿ ಜಿಲ್ಲಾ ಅಧ್ಯಕ್ಷ ಸಿ.ಎಚ್.ಮಂಜುನಾಥ್ ಮಾತನಾಡಿ, ಮಹಾನ್ ಮಾನವತಾವಾಧಿ ಅಂಬೇಡ್ಕರ್ ಕುರಿತು ಹಗುರವಾಗಿ ಯಾರೇ ಮಾತನಾಡಲಿ ಸಹಿಸುವುದಿಲ್ಲ. ದೇಶಕ್ಕೆ ಅವರ ಕೊಡುಗೆ ಅರಿಯದ ಗೃಹ ಸಚಿವರ ಹೇಳಿಕೆಯಿಂದಾಗಿ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಕೂಡಲೇ ಷಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕೋರಿದರು.
ಮುಖಂಡರಾದ ಟಿಪ್ಪು ಖಾಸಿಂ ಆಲಿ, ಹೊನ್ನೂರಪ್ಪ, ಮಹೇಶ್, ಆರ್. ಭೀಮಣ್ಣ, ಶಶಿಕುಮಾರ್, ಜಾಕೀರ್ ಹುಸೇನ್, ಕರಿಬಸಪ್ಪ ಚನ್ನಿಗರಾಮಯ್ಯ, ಬಿ.ಆರ್.ಶಿವಕುಮಾರ್, ಮಹಲಿಂಗಪ್ಪ ಇತರರಿದ್ದರು.