ಅಮಿತ್ ಷಾ ವಿರುದ್ಧ ಪ್ರತಿಭಟನೆ

mysore
Published on

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ಸಂಘಟನೆಗಳು ನಗರದಲ್ಲಿ  ಪ್ರತಿಭಟನೆ ನಡೆಸಿದವು.

ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಾಜೀನಾಮೆಗೆ ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯಿಂದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಸಚಿವರು ಅನಗತ್ಯವಾಗಿ ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.

ಇದು ಮತೀಯವಾದಿಗಳ ಹುನ್ನಾರದಂತಿದೆ. ಸಂವಿಧಾನ ತುಚ್ಛೀಕರಿಸಿ, ಅಸಮಾನತೆ, ಶೋಷಣೆಗೆ ಪೂರಕವಾಗಿರುವ ಮನುಸ್ಮತಿಯನ್ನು ಮುನ್ನೆಲೆಗೆ ತರುವ ಏಕೈಕ ದುರುದ್ದೇಶದಿಂದ ಈ ಹೇಳಿಕೆ ನೀಡಿದ್ದು, ಇದು ಖಂಡನೀಯ ಎಂದು ಕಿಡಿಕಾರಿದರು.

ಅಮಿತ್ ಷಾ ಅವರ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಬೇಕು. ಜತೆಗೆ, ಅವರು ಯಾವುದೇ ಸಂವಿಧಾನಿಕ ಹುದ್ದೆಯಲ್ಲಿ ಮುಂದುವರಿಸಬಾರದು. ಅವರು ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳ ನಟರಾಜ್, ಸಣ್ಣಯ್ಯ ಲಕ್ಕೂರು ಇನ್ನಿತರರಿದ್ದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದಿಂದಲೂ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದಿಂದಲೂ ಪ್ರತಿಭಟನೆ ನಡೆಯಿತು. ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾವಣೆಗೊಂಡ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಂಬೇಡ್ಕರ್ ಹೆಸರಿಗೆ ಅವಮಾನ ಮಾಡಿ ಮಾತನಾಡಿದ ಅಮಿತ್ ಷಾ ರಾಜೀನಾಮೆ ನೀಡಬೇಕು. ಜತೆಗೆ ಕೇಂದ್ರ ಸರ್ಕಾರ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗೃಹ ಸಚಿವರನ್ನಾಗಿ ಮಾಡಿರುವುದೇ ಖಂಡನೀಯ. ಅಂಬೇಡ್ಕರ್ ಎಂಬುದು ಬರೀ ಹೆಸರಲ್ಲ, ನಮ್ಮೆಲ್ಲರ ಉಸಿರು. ಅಂಬೇಡ್ಕರ್ ಕುರಿತು ಅವಹೇಳನ ಮಾಡಿರುವ ಅಮಿತ್ ಷಾ ಅವರನ್ನು ಬಂಧಿಸಬೇಕು ಎಂದೂ ಆಗ್ರಹಿಸಿದರು.

ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ಯಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ಕಾರ್ಯದರ್ಶಿ ವಿಶ್ವ ಪ್ರಸಾದ್, ಜಂಟಿ ಉಪಾಧ್ಯಕ್ಷರಾದ ಕೆ.ಮಲ್ಲೇಶ್, ಕೊ.ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಕುಶಾಲ್, ವರಹಳ್ಳಿ ಆನಂದ, ಜಯಚಂದ್ರ, ಗಣೇಶ್, ಪಿ.ಮರಹಳ್ಳಿ ಮಹೇಶು, ಲಿಂಪನ್ ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಕಿರಣ್, ನಂದೀಶ್, ಸಚಿನ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net