ಅಮಿತ್ ಷಾ ವಿರುದ್ಧ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

25_HSN_05
Published on

ಹಾಸನ: ಪ್ರಗತಿಪರ ಸಂಘಟನೆಗಳು ಮನುಸ್ಮೃತಿಯ ಪ್ರತಿಯನ್ನು ಸುಟ್ಟು, ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕರಾದ ಧರ್ಮೇಶ್ ಮಾತನಾಡಿ, ಅಂಬೇಡ್ಕರ್ ಎಂದರೆ ನಮಗೆ ದೇವರಲ್ಲ ಅದು ವಿಚಾರ. ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವ ಬದಲು ದೇವರೆಂದು ಹೇಳಿದ್ದರೆ ಸ್ವರ್ಗಕ್ಕೆ ಹೋಗುತ್ತಿದ್ದರು ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಹೇಳಿದ್ದಾರೆ. ನೀವು ಅಂಬೇಡ್ಕರ್.. ಅಂಬೇಡ್ಕರ್.. ಎಂದು ಹೇಳಿದರೇ ಇಡೀ ದೇಶವೇ ಸ್ವರ್ಗವಾಗುತ್ತದೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಎಂದರೇ ಪ್ರಜಾಪ್ರಭುತ್ವ, ಸಮಾನತೆ, ಸಮಾಜವಾದ. ಅಂಬೇಡ್ಕರ್ ವಿಚಾರಗಳ ಆಧಾರದಲ್ಲಿ ಈ ದೇಶ ನಡೆದರೆ ಖಂಡಿತವಾಗಿ ಭಾರತ ಸ್ವರ್ಗವಾಗುತ್ತದೆ. ಸ್ವರ್ಗ ಹುಡುಕಿಕೊಂಡು ಮೇಲೆಯೇ ಹೋಗಬೇಕಿಲ್ಲ ಎಂಬುದನ್ನು ಅಮಿತ್ ಶಾ ಅರ್ಥ ಮಾಡಿಕೊಳ್ಳಬೇಕು. ನೀವು ಪ್ರತಿನಿತ್ಯ ದೇವರ ಜಪ ಮಾಡುವುದನ್ನು ಬಿಟ್ಟು ಅಂಬೇಡ್ಕರ್ ಹೆಸರು ಹೇಳಿ ಎಂದು ತಿರುಗೇಟು ನೀಡಿದರು.

ಮನುಸ್ಮೃತಿಯ ಸಮಾನತೆಯನ್ನು ಹಾನಿ ಮಾಡುವ ಸಿದ್ಧಾಂತಗಳನ್ನು ಹೊಂದಿದ್ದು, ಸಮಾಜದ ಪ್ರಗತಿಗೆ ಅಡಚಣೆಯಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಮನುಸ್ಮತಿಯನ್ನು ಸುಟ್ಟು ಸಮ ಸಮಾಜಕ್ಕೆ ನಾಂದಿ ಹಾಡಿದರು. ಅಮಿತ್ ಶಾ ಅವರ ಹೇಳಿಕೆಗಳು ಸಂವಿಧಾನದ ತತ್ತ್ವಗಳಿಗೆ ವಿರುದ್ಧವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಶಂಕರರಾಜು, ಜೈಭೀಮ್ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ್, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷ ಸಮೀರ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಜಗದೀಶ್, ಅರವಿಂದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net