

ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಷಾ, ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಬಗ್ಗೆ ಷಾ ಅವರು ಬಿಜೆಪಿ ಅಂತರಂಗದ ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. ಇದು ಅಂಬೇಡ್ಕರ್ ಬಗ್ಗೆ ಅವರಿಗಿರುವ ಅಸಹನೆ ತೋರಿಸುತ್ತದೆ. ಬಾಬಾ ಸಾಹೇಬ್‌ರ ವಿರುದ್ಧ ಅಸಹನೆಯಿಂದ ಮಾತನಾಡುತ್ತಿರುವುದು ಅವರ ಕೀಳು ಮನಸ್ಥಿತಿಗೂ ಸಾಕ್ಷಿಯಾಗಿದೆ. ಬಹುಸಂಖ್ಯಾತ ಜನರನ್ನು ನೋಡುವ ಸಂಘ ಪರಿವಾರದ ದೃಷ್ಟಿಕೋನವೂ ಬಯಲಾಗಿದೆ ಎಂದು ಹರಿಹಾಯ್ದರು
ಅವರ ಮಾತಿನಿಂದ ನಮಗೆ ಆಶ್ಚರ್ಯವಾಗಿಲ್ಲ. ನಮಗೆಲ್ಲ ಇದು ಗೊತ್ತಿತ್ತು. ಅವರ ಮಾತಿನಿಂದ ಇಡೀ ದೇಶಕ್ಕೆ ಬಿಜೆಪಿಯ ಅಂತರಂಗದ ಅರಿವಾಗಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಡಿಯಲ್ಲೇ ಕಾರ್ಯನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ವ್ಯಾಖ್ಯಾನಿಸಿರುವ ಅಮಿತ್ ಷಾ ಅವರಿಗೆ ದೇಶದ ಜನ ಛೀಮಾರಿ ಹಾಕಬೇಕಿದೆ ಎಂದೂ ಹೇಳಿದರು.
ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವಿಲ್ಲದಿದ್ದರೆ ಷಾ ಅವರು ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಕೂಡಲೇ ರಾಷ್ಟ್ರಪತಿ ಅವರು ಮಧ್ಯೆಪ್ರವೇಶ ಮಾಡಿ ಇವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕೆ.ಆರ್.ಬ್ಯಾಂಕ್ ಮಾಜಿ ಅಧ್ಯಕ್ಷ ವಾಸು, ಮಾಜಿ ಮೇಯರ್‌ಗಳಾದ ನಾರಾಯಣ್, ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಯತಿರಾಜ್, ಜಿ.ಸೋಮಶೇಖರ್, ಶ್ರೀಧರ್, ಜೋಗಿ ಮಹೇಶ್, ಮಂಜು, ವೀಣಾ, ಲತಾ ಮೋಹನ್, ಪುಟ್ಟಣ್ಣ, ರವಿಶಂಕರ್, ಶಿವಣ್ಣ, ದಾಸ್, ಬಾಲಪ್ಪ, ಶಂಕರ್, ವಿಶ್ವನಾಥ್, ಗುಣಶೇಖರ್ ಇನ್ನಿತರರಿದ್ದರು.