ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

18rajesh2
Published on

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಮಹಿಳಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಮಹಿಳಾ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರವನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಾಗಿ ಕೆಲವು ಸಮಯ ಪ್ರತಿಭಟನೆ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರ, ಗೃಹ ಸಚಿವ ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗಶಿಲ್ಪ ಉಮೇಶ್ ಕುದರ್ ಮಾತನಾಡಿ, ಕೇಂದ್ರ ಸರ್ಕಾರದ ಗೌರಯುತ ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಅತ್ಯಂತ ಖಂಡನೀಯ. ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಧ್ವನಿನೀಡಿದ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಯಾರೇ ಅವಹೇಳನಕಾರಿಯಾಗಿ ಮಾತನಾಡಿದರೂ ದೇಶದ ಪ್ರತಿಯೊಬ್ಬ ಮಹಿಳೆಯರೂ ಅದನ್ನು ಖಂಡಿಸಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದಲ್ಲಿರುವ ಪ್ರತಿಯೊಬ್ಬ ಮಹಿಳೆಯರಿಗೂ ಹಕ್ಕು-ಅಧಿಕಾರಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೇ ಇಂದಿಗೂ ನಮ್ಮನ್ನು ಆಳುವ ಪಕ್ಷಗಳು ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಪ್ರಪಂಚದಾದ್ಯಂತ ಇಂದು ಅಂಬೇಡ್ಕರ್ ಅವರ ಜ್ಞಾನವನ್ನು ಗೌರವಿಸಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರೇ ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ಮೂಲಕ ಮಹಿಳೆಯರು ಹೆಚ್ಚು ಸಂಘಟಿತರಾಗಬೇಕು. ಕೇಂದ್ರ ಸಚಿವ ಅಮಿತ್ ಷಾ ಕೂಡಲೇ ರಾಜಿನಾಮೆ ನೀಡಬೇಕು. ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ರಮಾಭಾಯಿ ಅಂಬೇಡ್ಕರ್ ಸಂಘದ ಅಧ್ಯಕ್ಷೆ ಪುಷ್ಪ ಮರಿಸ್ವಾಮಿ ಮಾತನಾಡಿ, ಪ್ರಸ್ತುತ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜಗತ್ತಿನಾದ್ಯಂತ ಗೌರವಿಸಲಾಗುತ್ತಿದೆ. ಅಂತಹ ಮಹಾನ್ ಚೇತನದ ಹೆಸರನ್ನು ನಾವೆಂದಿಗೂ ್ಯಾಶನ್‌ಗಾಗಿ ಕೂಗುವುದಿಲ್ಲ. ಅವರು ಮಹಿಳೆಯರ ಪಾಲಿಗೆ ನಿಜವಾಗಲೂ ದೇವರಾಗಿದ್ದಾರೆ. ಅವರನ್ನು ಸಂಸತ್ತಿನಲ್ಲಿ ಅಪಮಾನ ಮಾಡಿರುವ ಅಮಿತ್ ಷಾ ಅವರು ರಾಜೀನಾಮೆಯನ್ನು ನೀಡಬೇಕು. ಅವರನ್ನು ದೇಶದ್ರೋಹಿ ಆರೋಪದಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಸದಸ್ಯರಾದ ಮಂಜುಳಾ, ಮಂಗಳಮ್ಮ, ಶ್ವೇತಾ, ರೇಣುಕಾ, ಕವಿತಾ, ಪಾರ್ವತಿ, ವಿವಿಧ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಎ.ನಾಗಮಣಿ, ಎಐಟಿಯುಸಿ ಸದಸ್ಯೆ ಶಹೀದಾಬಾನು, ಡಿ.ಎನ್.ಉಷಾ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ ರವಿಕುಮಾರ್, ನೀಲಮ್ಮ, ಎಸ್ಡಿಪಿಐ ಮಹಿಳಾ ಘಟಕದ ವಹೀದಾ ಪಾರ್ವತಮ್ಮ, ಜಯಮಾಲ ಹಾಗೂ ವಿವಿಧ ದಲಿತ ಮಹಿಳಾ ಸಂಘಟನೆಗಳ ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net