

ಚಾಮರಾಜನಗರ: ದೇಶದಲ್ಲಿರುವ ಮುಗ್ಧ ಜನರನ್ನು ಮೋಸಗೊಳಿಸಿ ತಮ್ಮ ವೈಯಕ್ತಿಕ ಅಭಿವೃದ್ದಿಯನ್ನು ಮಾಡಿಕೊಳ್ಳುವ ಜನರು ಈ ದೇಶಕ್ಕೆ ಅಪಾಯಕಾರಿ ಎಂದು ವಿಚಾರವಾದಿ ಪ್ರೊ.ನರೇಂದ್ರ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಮತ್ತು ಜಾನಪದ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಪ್ರಜ್ಞೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜನರು ದೇವರ ಹೆಸರಿನಲ್ಲಿ ಪವಾಡಗಳ ಮೂಲಕ ಮನುಷ್ಯ ಸಂಬಂಧಗಳನ್ನು ದೂರ ಮಾಡುವ ವ್ಯವಸ್ಥೆಯ ಬಗೆಗೆ ಎಚ್ಚರಿಕೆಯಿಂದ ಇರಬೇಕು. ಪವಾಡಗಳ ಹೆಸರಿನಲ್ಲಿ ಅಮಾಯಕ ಹಾಗೂ ಮುಗ್ಧ ಜನರನ್ನು ಮೋಸಗೊಳಿಸಿ ತಮ್ಮ ವೈಯಕ್ತಿಕ ಅಭಿವೃದ್ದಿಯನ್ನು ಮಾಡಿಕೊಳ್ಳುವ ಜನರು, ಈ ದೇಶಕ್ಕೆ ಮಾರಕವಾಗಿದ್ದಾರೆ ಎಂದರು. ಇದೇ ವೇಳೆ ಕೆಲವು ಪವಾಡಗಳ ರಹಸ್ಯವನ್ನು ಅವರು ಬಯಲುಗೊಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಕೆಲವು ಮೌಡ್ಯಗಳಿಂದಾಗಿ ಜನರು ಸೂಕ್ತ ಚಿಕಿತ್ಸೆಯನ್ನು ಪಡೆಯದೇ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮೌಢ್ಯತೆ ಒಂದು ರೀತಿಯ ಮಾನಸಿಕ ರೋಗವಾಗಿದ್ದು, ಇದು ದೇಹದ ಸ್ವಾಸ್ಥ್ಯ ಹಾಗೂ ದೇಶದ ಸ್ವಾಸ್ಥ್ಯಕ್ಕೂ ಮಾರಕವಾಗಿದೆ. ಇಂದಿನ ಯುವ ಪೀಳಿಗೆಯು ಮೌಢ್ಯತೆಯ ವಿರುದ್ಧ ಹೋರಾಡಿ ಸ್ವಾಸ್ಥ್ಯಯುತ ಸಮಾಜ ಕಟ್ಟುವಲ್ಲಿ ಕೈಜೋಡಿಸಬೇಕಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಮೂಕಹಳ್ಳಿ ಮಾತನಾಡಿ, ಮೌಡ್ಯತೆ ದೇಶದಲ್ಲಿ ಬಡತನವನ್ನು ತರುವುದರ ತೆಗೆ ಪಕ್ಷಪಾತ, ಕೋಮುದ್ವೇಷ ಹಾಗೂ ಮನುಷ್ಯ ವೈರುಧ್ಯ ಬೆಳೆಯಲು ಕಾರಣವಾಗಿದೆ. ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯದ ಆಚರಣೆಗಳಿಂದಾಗಿ ಸಾಮಾಜಿಕ ಸಾಮರಸ್ಯಕ್ಕೆ, ಸಹೋದರತೆಯ ಬಾಳ್ವೆಗೆ ದಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಉಪನ್ಯಾಸಕ ಗುರುರಾಜು, ಪಿ.ರಾಣಿ, ಜಾನಪದ ವಿಭಾಗದ ಮುಖ್ಯಸ್ಥ ಡಾ.ಶಿವರಾಜು ಬೂದಿತಿಟ್ಟು, ಉಪನ್ಯಾಸಕರಾದ ಡಾ. ಜಗದೀಶ್, ಡಾ ಮಹೇಶ್, ಶ್ವೇತಾ, ಡಾ.ಮಹದೇವಮೂರ್ತಿ, ಸವಿತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.