ಅಮಾಯಕರ ಪರವಾಗಿ ಪತ್ರ ಬರೆದರೆ ತಪ್ಪಲ್ಲ:ತಂಗಡಗಿ

eede5209-52f6-44d3-b64e-3616273284a0
Published on

ಕೊಪ್ಪಳ:ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಘಟನೆ ಸೇರಿ ಇತರ ಗಲಭೆಗಳಲ್ಲಿ ಅಮಾಯಕರ ವಿರುದ್ಧ ಪ್ರಕರಣ ಕೈ ಬಿಡುವಂತೆ ನಮ್ಮ ಪಕ್ಷದ ಹಿರಿಯ ನಾಯಕ ತನ್ವೀರ್ ಸೇಠ್ ಪತ್ರ ಬರೆದಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಮಾಯಕರಿದ್ದಲ್ಲಿ ರಕ್ಷಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸಮರ್ಥಿಸಿಕೊಂಡರು.

ಸೇಠ್ ಹಿರಿಯ ಶಾಸಕರು. ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಪತ್ರ ಬರೆದಿದ್ದರಲ್ಲಿ ತಪ್ಪೇನಿದೆ ? ಪರಿಶೀಲನೆ ಮಾಡಲಿ. ನಿಜವಾದ ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆಯಾಗಲಿ ಎಂದು ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಬಿಜೆಪಿ, ಜೆಡಿಎಸ್‌ನವರಿಗೆ ನಮ್ಮ ಮೇಲೆ ಹೊಟ್ಟೆ ಉರಿ. ಐದು ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದು, ಇವರಿಗೆ ಟೀಕಿಸಲು ವಿಷಯ ಸಿಗುತ್ತಿಲ್ಲ. ನಮ್ಮ ಸರ್ಕಾರ ಅಸ್ಥಿರ ಎಂಬ ಪ್ರಶ್ನೇಯೇ ಇಲ್ಲ. ನಮ್ಮದು ಗಟ್ಟಿ ಸರ್ಕಾರ. ನಮ್ಮ ಡಿಸಿಎಂ ಬಹಳ ಬುದ್ಧಿವಂತರಿದ್ದಾರೆ. ಎಲ್ಲವನ್ನು ಸರಿಯಾಗಿ ನಿಭಾಯಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೆಲ ಶಾಸಕರು ಸಿಎಂಗೆ ಪತ್ರ ಬರೆದಿರುವ ವಿಷಯ ಹೊಸದಲ್ಲ. ನಮ್ಮ ಪಕ್ಷದಲ್ಲಿನ ನಿರಂತರ ಪ್ರಕ್ರಿಯೆ. ಆದರೆ, ವಿಪಕ್ಷಗಳು ಇಲ್ಲಸಲ್ಲದ ಸೃಷ್ಟಿ ಮಾಡುತ್ತಿದ್ದಾರೆ ಎಂದರು.


ಉಡುಪಿ ವಿದ್ಯಾರ್ಥಿನಿಯರ ಘಟನೆ ಲಘುವಾಗಿ ತೆಗೆದುಕೊಳ್ಳುವುದು ತಪ್ಪು. ತಪ್ಪೆಸಗಿದವರಿಗೆ ಶಿಕ್ಷೆಯಾಗಬೇಕು. ಬಿಜೆಪಿ ಅವಧಿಯಲ್ಲಿ ಶಾಲಾ ಮಕ್ಕಳು ನೆಮ್ಮದಿಯಿಂದ ಶಾಲೆಗೆ ಹೋಗಲಾಗಿಲ್ಲ. ಬಿಜೆಪಿ ಜಿಹಾದಿ ಕೆಲಸ ಮಾಡಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಅಶ್ವತ್ಥ ನಾರಾಯಣನಿಗೆ ಸಾಮಾನ್ಯ ಜ್ಞಾನ ಇಲ್ಲ. ಸದನದಲ್ಲಿ ಗಂಭೀರ ವಿಷಯ ಚರ್ಚೆಯಾಗುವಾಗ ಡ್ಯಾನ್ಸ್ ಮಾಡುತ್ತಾನೆ. ಇಂಥವರು ನಮಗೆ ಬುದ್ಧಿ ಹೇಳುವ ಅಗತ್ಯವಿಲ್ಲವೆಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net