ಅಮಾನಿ ಕೆರೆ ಏರಿ ಬಿರುಕು

21-GPT-3
ಗುಂಡ್ಲುಪೇಟೆ ತಾಲೂಕಿನ ವಿಜಯಪುರ ಅಮಾನಿ ಕೆರೆಯ ಏರಿಯಲ್ಲಿ ಭಾರೀ ಬಿರುಕುಗಳು ಉಂಟಾಗಿವೆ.
Published on

ಗುಂಡ್ಲುಪೇಟೆ: ತಾಲೂಕಿನ ವಿಜಯಪುರ ಅಮಾನಿ ಕೆರೆಯ ಏರಿಯ ಉದ್ದಕ್ಕೂ ದೊಡ್ಡ ದೊಡ್ಡ ಬಿರುಕುಗಳುಂಟಾಗಿದ್ದು, ಮಳೆಗಾಲದಲ್ಲಿ ಕೆರೆ ತುಂಬಿದರೆ ಕೆರೆ ಕೋಡಿ ಒಡೆಯುವ ಭೀತಿ ಎದುರಾಗಿದೆ.

ಗುಂಡ್ಲುಪೇಟೆ ದೊಡ್ಡಕೆರೆ ಎಂದು ಕರೆಯಲಾಗುವ ವಿಜಯಪುರ ಅಮಾನಿ ಕೆರೆಯ ಏರಿಯನ್ನು ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿತ್ತು. 2018ರಲ್ಲಿ ಒಂದೇ ದಿನ ಬಿದ್ದ ಭಾರೀ ಮಳೆಯಿಂದ ಕೆರೆಗೆ ಭಾರೀ ಪ್ರಮಾಣದ ನೀರು ಹರಿದು ಬಂದಿತ್ತು. ಅಲ್ಲಲ್ಲಿ ನೀರು ಸಣ್ಣದಾಗಿ ಜಿನುಗುತ್ತಿದ್ದರೂ ಅದನ್ನು ತಡೆಗಟ್ಟಲು ಮುಂದಾಗದ ಪರಿಣಾಮ ನೀರಿನ ರಭಸ ತಡೆಯಲು ಸಾಧ್ಯವಾಗದಂತಾಗಿ ಏರಿ ಒಡೆದು ಭಾರೀ ಪ್ರಮಾಣದ ನೀರು ವ್ಯಾರ್ಥವಾಗಿ ಹರಿದು ಹೋಗಿತ್ತು.

ನಂತರ ಹೊಸದಾಗಿ ಏರಿಯನ್ನು ನಿರ್ಮಿಸಿದ್ದರೂ ಅಲ್ಲಲ್ಲಿ ಏರಿಳಿತ ಇದ್ದುದರಿಂದ ಸಣ್ಣ ನೀರಾವರಿ ಇಲಾಖೆ ಕಳೆದ ವರ್ಷ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಏರಿಯ ಉದ್ದಕ್ಕೂ ಮಣ್ಣುಹಾಕಿ ಸಮತಟ್ಟು ಮಾಡುವ ಕಾಮಗಾರಿ ಕೈಗೊಂಡಿತ್ತು. ಕಳೆದ ವರ್ಷ ಬಿದ್ದ ಮಳೆ ಹಾಗೂ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ನೀರು ಹರಿಸಿದ್ದರಿಂದ ತುಂಬಿ ಕೋಡಿಬಿದ್ದಿದ್ದರೂ ಸದ್ಯ ಬೇಸಿಗೆ ಹಾಗೂ ಭೂಮಿಯಲ್ಲಿ ನೀರು ಇಂಗಿದ್ದರಿಂದ ನೀರು ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ಕಳೆದ ವರ್ಷ ನಿರ್ಮಿಸಿದ್ದ ಏರಿಯ ಉದ್ದಕ್ಕೂ ದೊಡ್ಡದಾದ ಬಿರುಕುಗಳು ಕಾಣಿಸಿಕೊಂಡಿವೆ. ಸಣ್ಣದಾಗಿದ್ದ ಬಿರುಕುಗಳು ದಿನೇ ದಿನೇ ದೊಡ್ಡದಾಗುತ್ತಿದ್ದು ಏರಿಯ ಭದ್ರತೆಗೆ ಆಪಾಯತಂದೊಡ್ಡಿವೆ.

ಈ ವರ್ಷ ಮತ್ತೆ ಬಿರುಕು ಬಿಟ್ಟಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೊಳಗಾಗಿದ್ದಾರೆ. ಇನ್ನೇನು ಮುಂಗಾರು ಮಳೆ ಪ್ರಾರಂಭಗಾಗುತ್ತಿದ್ದು ಕೆರೆ ತುಂಬಿದರೆ ಏರಿ ಒಡೆದುಹೋಗುವ ಸಂಭವಗಳು ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net