ಕೊರಟಗೆರೆ: ಕರ್ತವ್ಯಲೋಪದ ಆರೋಪದಡಿ ಅಮಾನತಾಗಿದ್ದ ತಾಲೂಕಿನ ಕಸಬಾ ಹೋಬಳಿಯ ಕೆರೆಯಾಗಳಹಳ್ಳಿಯ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಮತ್ತು ಆತನೊಂದಿಗೆ ಬಂದಿದ್ದ 9 ಶಿಕ್ಷಕರ ವಿರುದ್ಧ ಬಿಇಒ ಸಿ.ವಿ.ನಟರಾಜ್ ಅವರು ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಆರೋಪದ ಮೇಲೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಕರ್ತವ್ಯ ಲೋಪದಡಿ ಅಮಾನತುಗೊಂಡಿರುವ ಕಸಬಾ ಹೋಬಳಿಯ ಕೆರೆಯಾಗಳ ಹಳ್ಳಿ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಅವರನ್ನು ಬೆಂಬಲಿಸಿ ಸ್ಥಳಿಯ ಇಬ್ಬರು ಶಿಕ್ಷಕರು ಮತ್ತು ತಾಲೂಕಿನವರಲ್ಲದ ಹೊರಗಿನ 6 ಜನ ಸೇರಿ ಒಟ್ಟು 9 ಮಂದಿ ವಿರುದ್ಧ ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ನಿಂದನೆ ಆರೋಪದ ಮೇರೆಗೆ ಕೊರಟಗೆರೆ ಠಾಣೆಗೆ ದೂರು ನೀಡಿದ್ದೇನೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ನಟರಾಜ್ ತಿಳಿಸಿದ್ದಾರೆ.
ಪ್ರಭಾರ ಮುಖ್ಯಶಿಕ್ಷಕ ಎಸ್. ದೇವರಾಜಯ್ಯ ಅವರನ್ನು ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿತ್ತು. ಅಮಾನತು ಆದೇಶದಲ್ಲಿ ಲೋಪದೋಷ ಇದ್ದರೆ ಡಿಡಿಪಿಐ ಅಥವಾ ಶಿಕ್ಷಣ ಇಲಾಖೆಯು ಮೇಲಧಿಕಾರಿಯವರಿಗೆ ಮನವಿ ಸಲ್ಲಿಸಲು ಅವಕಾಶವಿದ್ದು, ಈ ಸಂಬಂಧ ಎಸ್. ದೇವರಾಜಯ್ಯ ಅವರು 8ರಿಂದ 9 ಜನರ ತಂಡದೊಂದಿಗೆ ನಮ್ಮ ಕಚೇರಿಗೆ ನುಗ್ಗಿ, ಅದೇ ಸ್ಥಳದಲ್ಲಿ ಮತ್ತೆ ನಿಯೋಜನೆ ಮಾಡದಿದ್ದರೇ ಮೇ 6ರಂದು ನಿನ್ನನ್ನು ವರ್ಗಾವಣೆ ಮಾಡಿಸದೇ ಬಿಡುವುದಿಲ್ಲ ಎಂದು
ಬೆದರಿಕೆ ಹಾಕಿದ್ದಾರೆ. ಈಗ ಅಮಾನತು ಆಗಿರುವ ದೇವರಾಜಯ್ಯನ ಮೇಲೆ ಪೋಕ್ಸೋ ಪ್ರಕರಣ ಇದೆ. ಇದಲ್ಲದೆ, ಅವರು 2 ಬಾರಿ ಅಮಾನತುಗೊಂಡಿದ್ದಾರೆ ಎಂದು ವಿವರಿಸಿದರು. ಕಸಬಾ ವಿಎಸ್ಎಸ್ಎನ್ ಅಧ್ಯಕ್ಷ ಕೆ.ಎಸ್.ವಿನಯ್ಕುಮಾರ್ ಇದ್ದರು.