

ಗೊಳಸಂಗಿ: ಗ್ರಾಮದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50ರ ಬಳಿಯ ಅಮರೇಶ್ವರ ಜಾತ್ರಾ ಮಹೋತ್ಸವ ಶ್ರಾವಣ ಮಾಸದ ಕಡೆಯ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಸ್ಥಳೀಯ ಗಾಣಿಗ ಸಮುದಾಯದ ನೇತೃತ್ವದಲ್ಲಿ ಜರುಗಿದ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಬೆಳಗ್ಗೆ 6 ರಿಂದ ನಿರಂತರ 24 ಗಂಟೆ ಕಾಲ ಭಕ್ತರಿಂದ ಭಜನಾ ಸಪ್ತಾಹ ನಡೆಯಿತು. ಸೋಮವಾರ ಬೆಳಗಿನ ಜಾವ 6 ಗಂಟೆಗೆ ಅಮರೇಶ್ವರ ಭವ್ಯ ಮೂರ್ತಿಗೆ ವಿಶೇಷ ಅಭಿಷೇಕವನ್ನು ಮುತ್ತಗಿಯ ಮುತ್ತುಸ್ವಾಮಿ ಹಿರೇಮಠ ಮತ್ತು ಶ್ರೀಕಾಂತ ಸ್ವಾಮಿ ಕಂಬಿಮಠ ಅವರಿಂದ ಪೂಜಾ ಕಾರ್ಯಗಳು ನೆರವೇರಿದವು. ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಮಾರಗೌಡ ಪಾಟೀಲ ಅವರ ಮನೆಯಿಂದ ದೇವಸ್ಥಾನದ ಕಲಶ ಹಾಗೂ ಪಲ್ಲಕ್ಕಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕಳಸಾರೋಹಣ ಮಾಡಲಾಯಿತು.
ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಅಮರೇಶ್ವರ ಪಲ್ಲಕ್ಕಿ ಉತ್ಸವ ಮುತ್ತೈದೆಯರ ಕಳಸದಾರತಿಯೊಂದಿಗೆ ಜರುಗಿತು. ಗಾಣಿಗ ಸಮಾಜದ ಪ್ರಮುಖರಾದ ಅಯ್ಯಪ್ಪಗೌಡ ಪರಮಗೊಂಡ, ಶಂಕರಗೌಡ ಪಾಟೀಲ, ಸಂಗಪ್ಪ ಕೋಲಾರ, ಬಸಪ್ಪ ಬುಜಂಗೋಳ, ಗಜೇಂಡಪ್ಪ ಪರಮಗೊಂಡ, ಈರಪ್ಪ ಮಲಗೊಂಡ, ರಾವುತ ಸೀಮಿಕೇರಿ, ಡಾ. ಎಂ.ಎಸ್. ಮೇಟಿ ಇತರರಿದ್ದರು.