ಅಮರಶಿಲ್ಪಿ ಜಕಣಾಚಾರಿ ಪುತ್ಥಳಿ ನಿರ್ಮಾಣಕ್ಕೆ ಕ್ರಮ

2blrp5
Published on

ಬೇಲೂರು: ಜಗತ್ತಿಗೆ ಅತ್ಯದ್ಭುತ ಶಿಲ್ಪಕಲೆಯನ್ನು ನೀಡಿದ ಅಮರಶಿಲ್ಪಿ ಜಕಣಾಚಾರಿ ನೆನಪಿಗಾಗಿ ಬೇಲೂರು ಪಟ್ಟಣದಲ್ಲಿ ಶೀಘ್ರ ಜಕಣಾಚಾರಿ ಪುತ್ಥಳಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶಿಲ್ಪಕಲೆಯ ಸೌಂದರ್ಯವನ್ನೇ ಹೊಂದಿರುವ ಬೇಲೂರು-ಹಳೇಬೀಡು ದೇವಾಲಯಗಳನ್ನು ತಮ್ಮ ಕೈಚಳಕದ ಮೂಲಕ ಕೆತ್ತಿರುವ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆ ನಿರ್ಮಿಸಲು ಚನ್ನಕೇಶವ ದೇವಾಲಯದ ಆವರಣದಲ್ಲಿ ಸ್ಥಳಾವಕಾಶ ಮಾಡಿ ಕೊಡಬೇಕೆಂದು ಈ ಹಿಂದೆಯೇ ಹೋರಾಟ ನಡೆದಿತ್ತು. ಆದರೆ ಪುರಾತತ್ವ ಇಲಾಖೆ ಅನುಮತಿ ನೀಡದ ಕಾರಣ ಸಾಧ್ಯವಾಗಿಲ್ಲ. ಅದ್ದರಿಂದ ಪಟ್ಟಣದ ಯಾವುದಾದರೂ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರ ಹೆಸರನ್ನು ವಿಶ್ವವಿದ್ಯಾಲಯವೊಂದಕ್ಕೆ ಇಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಪ್ರಕಟಿಸಬೇಕೆಂದು ಈ ಹಿಂದೆಯೇ ನಾನು ಸದನದಲ್ಲಿ ಹೋರಾಟ ನಡೆಸಿದ್ದೆ. ಜಕಣಾಚಾರಿಯವರು ತಮ್ಮ ಇಡೀ ಜೀವನವನ್ನು ಶಿಲ್ಪ ಕಲೆಯ ಕೆತ್ತನೆಯಲ್ಲೇ ತೊಡಗಿಸಿಕೊಂಡಿದ್ದರು. ಜಕಣಾಚಾರಿ ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದು, ಇವರು ಕಪ್ಪೆಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾಕೃತಿಯಿಂದ ನಿರ್ಮಿಸಿ ಜಗತ್ತಿಗೆ ನೀಡಿದವರು ಎಂದರು.

ತಹಸೀಲ್ದಾರ್ ರಮೇಶ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದು, ಸೂರ್ಯಚಂದ್ರ ಇರುವವರೆಗೂ ಅವರ ಹೆಸರು ಅಮರವಾಗಿ ಇರುತ್ತದೆ ಎಂದರು.
ಆರಕ್ಷಕ ವೃತ್ತ ನೀರಿಕ್ಷಕ ಶ್ರೀಕಾಂತ್, ತಹಸೀಲ್ದಾರ್ ಗ್ರೇಡ್-2 ಆಶೋಕ್ ಕುಮಾರ್, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪುರುಷೋತ್ತಮ, ಯುವ ಘಟಕದ ಅಧ್ಯಕ್ಷ ಜಗದೀಶ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರವಿಕುಮಾರ್, ಗ್ರಾಪಂ ಸದಸ್ಯ ಗಿರೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net