

ಹುಬ್ಬಳ್ಳಿ: ಇಲ್ಲಿಯ ಅಮರಗೋಳ- ಅಮ್ಮಿನಬಾವಿ ರಸ್ತೆ ಅಭಿವೃದ್ಧಿ ಹಾಗೂ ವಿಸ್ತರಣೆಗೆ ಮನೆ ಮತ್ತು ಜಮೀನು ಕಳೆದುಕೊಂಡು ನಿರಾಶ್ರಿತರಾದವರಿಗೆ ನೀಡಿದ್ದ ಭರವಸೆಯಂತೆ 137 ಮನೆ ನಿರ್ವಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.
ಅಮರಗೋಳ ಗ್ರಾಮದ ಆಶ್ರಯ ಬಡಾವಣೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಹಾಗೂ ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ಮಾದರಿ ಮನೆಗಳ ನಿಮಾಣ ಕಾಮಗಾರಿಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಭೂವಿಜ್ಞಾನ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ, ಆನ್ಲೈನ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಕಿಸಾನ್ ಸಮ್ಮಾನ್ ಯೋಜನೆ ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ನೇರ ಪ್ರಸಾರ ಕಾರ್ಯಕ್ರಮ ನಡೆಯಿತು.
26 ಕೋಟಿ ರೂ. ಜಮಾ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ 1.31 ಲಕ್ಷ ರೈತರಿಗೆ 26 ಕೋಟಿ ರೂ. ಜಮಾ ಆಗಿದೆ ಎಂದರು.
ರೈತರು ಸುಳ್ಳಿಗೆ ಬಲಿಯಾಗಬಾರದು. 1904ರಲ್ಲಿ ಬ್ರಿಟಿಷರು ತಮ್ಮ ಅನುಕೂಲಕ್ಕೆ ಜಾರಿ ಮಾಡಿದ ಎಪಿಎಂಸಿ ಕಾನೂನನ್ನು ಈಗ ತಿದ್ದುಪಡಿ ಮೂಲಕ ಬದಲಾಯಿಸಲಾಗಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಣಾಳಿಕೆಯಲ್ಲಿಯೂ ಹೇಳಲಾಗಿತ್ತು. ಬೆಂಬಲ ಬೆಲೆ ಯೋಜನೆ ಬಂದ್ ಆಗುವುದಿಲ್ಲ. ಎಪಿಎಂಸಿಗಳನ್ನೂ ಮುಚ್ಚುವುದಿಲ್ಲ. ರೈತರು ತಮ್ಮ ಫಸಲನ್ನು ತಮಗೆ ಇಷ್ಟ ಬಂದಲ್ಲಿ ಮಾರಾಟ ಮಾಡಬಹುದು. ಇದರಿಂದ ಬೆಳೆಗಾರರಿಗೆ ಲಾಭವಾಗಲಿದೆ ಎಂದರು.
ಕಾಂಗ್ರೆಸ್ ದಲ್ಲಾಳಿಗಳ ಪಕ್ಷ, ರೈತ ಹೋರಾಟದ ಹೆಸರಲ್ಲಿ ಅನೇಕ ದಲ್ಲಾಳಿಗಳು ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿಯವರು ಮಾಡುವ ಒಳ್ಳೆಯ ಕೆಲಸಗಳಿಗೆ ಬರೀ ವಿರೋಧ ಮಾಡುವುದು ಕಾಂಗ್ರೆಸ್ ಕೆಲಸವಾಗಿದೆ ಎಂದು ದೂರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 7 ಕೋಟಿ ರೂ. ವೆಚ್ಚದಲ್ಲಿ 137 ಮನೆ ನಿರ್ವಿುಸಲಾಗುವುದು. ಪ್ರತಿ ಮನೆಗೆ 5.10 ಲಕ್ಷ ರೂ. ಖರ್ಚಾಗಲಿದೆ. ಇವುಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಸ್ತೆ ವಿಸ್ತರಣೆಗೆ ಭೂಮಿ ನೀಡಿದವರಿಗೆ ನೀಡಿದ ಭರವಸೆಯಂತೆ ಮನೆ ಕಟ್ಟಿಕೊಡಲಾಗುತ್ತಿದೆ ಎಂದರು. ಮಾಜಿ ಮಹಾಪೌರರಾದ ಮಂಜುಳಾ ಅಕ್ಕೂರ, ಪೂರ್ಣಾ ಪಾಟೀಲ, ಮಾಜಿ ಉಪಮಹಾಪೌರ ಚಂದ್ರಶೇಖರ ಮನಗುಂಡಿ, ಪಾಲಿಕೆ ಮಾಜಿ ಸದಸ್ಯರಾದ ಅಜ್ಜಪ್ಪ ಹೊರಕೇರಿ, ಶಾಂತಪ್ಪ ದೇವಕ್ಕಿ, ಮುಖಂಡರಾದ ಸಿ.ಎನ್. ಕರಿಕಟ್ಟಿ, ಮಲ್ಲೇಶ ಇದ್ಲಿ, ಶಿವಾನಂದ ನಾರಾಯಣಪುರ, ಬಸವರಾಜ ಚಳಗೇರಿ, ರುದ್ರಪ್ಪ ಬೆಟಗೇರಿ ಇತರರು ಇದ್ದರು. ಸಂತೋಷ ಸೋಗಿ ಸ್ವಾಗತಿಸಿದರು.</