

ಧಾರವಾಡ; ಗ್ರಾ.ಪಂ. ಚುನಾವಣೆಯ ಮತದಾನಕ್ಕೆ 2 ದಿನ ಬಾಕಿ ಇರುವಾಗ ತಾಲೂಕಿನ 2 ಗ್ರಾಮಗಳಲ್ಲಿ ಭಾನುವಾರ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ತಾಲೂಕಿನ ಅಂಬ್ಲಿಕೊಪ್ಪ, ಯರಿಕೊಪ್ಪ ಗ್ರಾಮಗಳಲ್ಲಿ ವಾಮಾಚಾರ ಮಾಡಿಸಲಾಗಿದೆ.
ಅಂಬ್ಲಿಕೊಪ್ಪದ ಗ್ರಾ.ಪಂ. ಅಭ್ಯರ್ಥಿ ಮಂಜುಳಾ ವಡ್ಡರ್ ಮನೆ ಮುಂದೆ 3 ತಾಯತ, 3 ಕಪ್ಪು ದಾರ, ಲಿಂಬೆಹಣ್ಣು, ಸಾಸಿವೆ ಇಟ್ಟು ವಾಮಾಚಾರ ಮಾಡಲಾಗಿದೆ. ಮತ್ತೊಂದೆಡೆ ಯರಿಕೊಪ್ಪದ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಶಾಲಾ ಆವರಣದಲ್ಲಿ ಸುಟ್ಟ ಲಿಂಬೆಹಣ್ಣು, ಇದ್ದಿಲು, ವಿವಿಧ ಬಣ್ಣದ ದಾರ ಸುತ್ತಿದ ಗಂಟು ಹಾಗೂ ಹೂವುಗಳನ್ನು ಚೆಲ್ಲಿ ವಾಮಾಚಾರ ಮಾಡಿಸಲಾಗಿದೆ.
ಎರಡೂ ಗ್ರಾಮಗಳ ಜನರು ವಾಮಾಚಾರದ ಕುರುಹು ಕಂಡ ಕೂಡಲೆ ಪಿಡಿಒಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿ ಹಾಗೂ ಗ್ರಾ.ಪಂ. ಸಿಬ್ಬಂದಿ, ವಾಮಾಚಾರದ ಸಾಮಗ್ರಿಗಳನ್ನು ಸುಟ್ಟು ಹಾಕಿದ್ದಾರೆ. ಘಟನೆಯಿಂದ ಯಾವುದೇ ಗೊಂದಲ ಉಂಟಾಗಿಲ್ಲ ಎಂದು ಯರಿಕೊಪ್ಪ ಗ್ರಾ.ಪಂ. ಚುನಾವಣಾ ಅಧಿಕಾರಿ ಉದಯಕುಮಾರ ಕದಂಬ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಹೀಗೆ ವಾಮಾಚಾರದಂಥ ಕೃತ್ಯಕ್ಕೆ ಕೆಲವರು ಮುಂದಾಗುತ್ತಿರುವುದು ಮತದಾರರಿಗೆ ಕಿರಿಕಿರಿ ಉಂಟುಮಾಡತೊಡಗಿದೆ.</