ಅಭ್ಯರ್ಥಿ ಬದಲಾಯಿಸಿ, ಬಿಜೆಪಿ ಗೆಲ್ಲಿಸಿ ಅಭಿಯಾನ ಫೆ. 16ರಂದು

Published on

ಹಾವೇರಿ: ಅಭ್ಯರ್ಥಿ ಬದಲಾಯಿಸಿ, ಬಿಜೆಪಿ ಗೆಲ್ಲಿಸಿ ಜಾಗೃತ ಸಮಿತಿ ವತಿಯಿಂದ ಫೆ. 16ರಂದು ಹಾವೇರಿ ಮೀಸಲು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಯಿಸಿ, ಬಿಜೆಪಿ ಗೆಲ್ಲಿಸಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸಂತೋಷರೆಡ್ಡಿ ತಬರಡ್ಡಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಪಕ್ಷದ ಮುಖಂಡರು, ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಿಜೆಪಿ ಅಭ್ಯರ್ಥಿ ಬದಲಾಯಿಸಲು ಮನವರಿಕೆ ಮಾಡಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಜಾಗೃತಿ ಅಭಿಯಾನ ಕೈಗೊಳ್ಳುವ ಕುರಿತು ರೂಪರೇಷಗಳನ್ನು ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಬಿಜೆಪಿ ಶಾಸಕ ನೆಹರು ಓಲೇಕಾರ ಅವರಿಗೆ ಬ್ಯಾಡಗಿ ಕ್ಷೇತ್ರದಲ್ಲಿ ಎರಡು ಬಾರಿ, ಹಾವೇರಿ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ ಪಕ್ಷವು ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಆದರೆ, ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅರೋಪಿಸಿದರು.
ನಗರ ಸೇರಿ ಗ್ರಾಮೀಣ ಪ್ರದೇಶದ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿದ್ದು, ರಸ್ತೆಗಳಲ್ಲಿ ಸಂಚರಿಸುವ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬಿಜೆಪಿ ಪಕ್ಷ ಹಾಗೂ ಜನರು ನೀಡಿದ್ದ ಆಶೀರ್ವಾದವನ್ನು ಶಾಸಕ ನೆಹರು ಓಲೇಕಾರ ಅವರು ದುರುಪಯೋಗ ಪಡೆಸಿಕೊಂಡು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕೇವಲ ಅವರ ಹಿಂಬಾಲಕರಿಗೆ ಮಾತ್ರ ಮಣೆ ಹಾಕುತ್ತಿರುವುದು, ಸ್ವಜನಪಕ್ಷಪಾತ ಮಾಡುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವು ತಂದಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಮರೆತಿರುವ ಶಾಸಕರನ್ನು ಬದಲಾಯಿಸಿ, ಬಿಜೆಪಿ ಗೆಲ್ಲಿಸುವಂತೆ ಜಾಗೃತ ಸಮಿತಿ ರಚಿಸಿಕೊಂಡು ಒಗ್ಗಟ್ಟಾಗಿ ಪ್ರತಿ ಗ್ರಾಮಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಪಡೆಯಲು ಹತ್ತಾರು ಆಕಾಂಕ್ಷಿಗಳು ಇರುವುದು ಸರ್ವೇ ಸಾಮಾನ್ಯ. ಆದರೆ, ಶಾಸಕರು ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವರ ಘನತೆಗೆ ಶೋಭೆ ತರುವುದಿಲ್ಲ. ಪಕ್ಷ 5 ಬಾರಿ ಸ್ಪರ್ಧಿಸಲು ಅವಕಾಶ ನೀಡಿದೆ. ಅಧಿಕಾರ ಕೇವಲ ಇವರಿಗೆ ಮಾತ್ರ ಸೀಮಿತವೆ ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ದಲಿತ ಮುಖಂಡರಾದ ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ಕೆ.ಬಿ. ಮಲ್ಲಿಕಾರ್ಜುನ, ಮಲ್ಲೇಶಪ್ಪ ಹರಿಜನ, ಶ್ರೀಪಾದ ಬೇಟಗೇರಿ, ರಾಮು ಮಾಳಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದು, ಪಕ್ಷ ಇವರಿಗೂ ಅವಕಾಶ ಮಾಡಿಕೊಟ್ಟರೆ ಬೇರೋಬ್ಬರು ನಾಯಕರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ಎಂ.ಪಿ. ಕನವಳ್ಳಿ, ಪ್ರಭುಲಿಂಗ ಸಣ್ಣಮನಿ, ಪ್ರಕಾಶ ಬಣಕಾರ, ದ್ಯಾಮಣ್ಣ ದಿಡಗೂರ, ದ್ಯಾಮಣ್ಣ ಓಲೇಕಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net