

ಕೊಳ್ಳೇಗಾಲ: ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಅಭಿವೃದ್ಧಿಯನ್ನು ಮೂಲ ಮಂತ್ರವಾಗಿಟ್ಟುಕೊಂಡು ದಿಟ್ಟ ಹೆಜ್ಜೆ ಇಡುತ್ತಿದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿಯ 44 ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಭಾರತಾಂಬೆ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹಾಗೂ ಡಾ. ಶ್ಯಾಮಪ್ರಕಾಶ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಗಾಂಧೀಜೀ ಅವರ ಸ್ವಚ್ಛ ಭಾರತ ಪರಿಕಲ್ಪನೆ ಈಡೇರಿರಲಿಲ್ಲ. ಪ್ರಧಾನಿ ಮೋದಿ ಅವರಿಂದ ಈಗ ಅದು ಸಾಧ್ಯವಾಗಿದೆ. 12 ಕೋಟಿ ಕುಟುಂಬಗಳು ಶೌಚಗೃಹ ನಿರ್ಮಾಣ ಮಾಡಿಕೊಂಡಿವೆ. ಹಿಂದೆ ಬಡವರು ಬ್ಯಾಂಕ್‌ನಲ್ಲಿ ಖಾತೆ ತೆಗೆಯಲು ಅವಕಾಶವಿರಲಿಲ್ಲ. ಆದರೀಗ ಜನಧನ ಯೋಜನೆಯಡಿ 40 ಕೋಟಿ ಬಡವರು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆಗೆದಿದ್ದಾರೆ ಎಂದರು.
ಅಂತ್ಯೋದಯ ಅಡಿಯಲ್ಲಿ ಕೇಂದ್ರ ಮತ್ತು ಸರ್ಕಾರದಿಂದ ಬರುವ ವಿವಿಧ ಯೋಜನೆಯ ಹಣ ನೇರವಾಗಿ ಬಡವರ ಖಾತೆಗೆ ಹೋಗಲು ಸಾಧ್ಯವಾಯಿತು. ಕೋವಿಡ್‌ನಲ್ಲಿ 2 ವರ್ಷಗಳು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 86 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ. ಅಭಿವೃದ್ಧಿ ವಿಚಾರಕ್ಕೆ ಬಂದರೆ ರಾಷ್ಟ್ರೀಯ ಹೆದ್ದಾರಿ ರಸ್ತೆ, ರೈಲ್ವೆ, ವಾಯು ಪಡೆ, ನೌಕಪಡೆ ಅತಿ ಎತ್ತರಕ್ಕೆ ಬೆಳೆದಿದೆ. ಇವೆಲ್ಲದರ ಕಾರಣ ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ ಎಂದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ರಮೇಶ್ ಮುರಾರಿ, ಕಾರ್ಯದರ್ಶಿ ರವಿಕುಮಾರ್, ಯುವ ಮೋರ್ಚಾ ಕಾರ್ಯದರ್ಶಿ ಪ್ರಸಾದ್, ಯುವ ಮೋರ್ಚಾ ಖಜಾಂಚಿ ಬಾಲಾಜಿ, ನಗರಸಭೆ ನಾಮನಿದೇರ್ಶಿತ ಸದಸ್ಯ ಶಂಕರ್, ಮುಖಂಡ ಪ್ರಭುಸ್ವಾಮಿ, ರಮೇಶ್, ಬಸವರಾಜು (ದ್ವಾರಕಿ), ಗೋಪಾಲ್, ಶಿವಮಲ್ಲು ಮತ್ತಿತರಿದ್ದರು.