

ನಾಗಮಂಗಲ: ನಾಡಿನಲ್ಲಿ ಈ ಹಿಂದೆ ಅಭಿವೃದ್ಧಿ ಇಲ್ಲದಿದ್ದರೂ, ಶಿಕ್ಷಿತರಿಲ್ಲದಿದ್ದರೂ ಮಾನವೀಯತೆ ಇತ್ತು. ಆದರೆ ಇಂದು ಅಭಿವೃದ್ಧಿಯ ಜತೆಗೆ ಶಿಕ್ಷಿತರ ಸಂಖ್ಯೆ ಹೆಚ್ಚಾಗಿದ್ದರೂ ಮಾನವೀಯತೆ ಮರೆಯಾಗುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರವ್ಯಕ್ತಪಡಿಸಿದರು.
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಚಟ್ಟೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾಯಮ್ಮದೇವಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಒಬ್ಬರ ಕಷ್ಟದಲ್ಲಿ ಮತ್ತೊಬ್ಬರು ಭಾಗಿಯಾಗುತ್ತಿದ್ದರು. ಹಳ್ಳಿಗಳಲ್ಲಿ ಒಗ್ಗಟ್ಟು ಹೆಚ್ಚು ಕಾಣಿಸುತ್ತಿತ್ತು. ಆಗ ಹಳ್ಳಿಗಳಲ್ಲಿ ಅಭಿವೃದ್ಧಿ ಎಂಬುದೇ ಇರಲಿಲ್ಲ. ಈಗ ಗ್ರಾಮೀಣ ಪ್ರದೇಶಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾದಷ್ಟು ಮನುಷ್ಯತ್ವ , ತಾಯಿ ಹೃದಯದ ಜನರು ಕಾಣಸಿಗದಂತಾಗಿದ್ದಾರೆ. ಗ್ರಾಮಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ದ್ವೇಷ ಸಾಧಿಸುವುದು, ಕೊಲೆ ಮಾಡುವ ಹಂತಕ್ಕೆ ಬದಲಾಗಿರುವುದು ವಿಷಾದನೀಯ ಎಂದರು.
ಇಂದು ಒಂದು ಕಡೆ ಶ್ರೀಮಂತಿಕೆ ಬೆಳೆಯುತ್ತಿದೆ. ಅದೇ ರೀತಿ ಮತ್ತೊಂದು ಕಡೆ ಬಡತನವೂ ಜೀವಂತವಾಗಿದೆ. ನಾಗಮಂಗಲ ತಾಲೂಕಿನಲ್ಲಿ ಬರಗಾಲ ಎಂಬ ಹಣೆಪಟ್ಟಿಯಿತ್ತು. ಈಗಲೂ ಬರ ತಾಲೂಕು ಎಂದು ಘೋಷಣೆಯಾಗಿದೆ. ಆದರೆ ಕಳೆದ ಬಾರಿ ಸುರೇಶ್‌ಗೌಡ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿದ ಪರಿಣಾಮ ಇಂದು ಎಲ್ಲ ಕೆರೆಗಳಲ್ಲಿ ನೀರನ್ನು ಕಾಣಬಹುದಾಗಿದೆ ಎಂದರು.
ತಾಲೂಕಿನ ಜನತೆಯಲ್ಲಿ ಬಡತನವಿದ್ದರೂ, ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಈಗಿನ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿ ತದನಂತರ ಏನೇನೋ ನಿಯಮಗಳನ್ನು ಹೇರಿದ್ದಾರೆ. ಮಹಿಳೆಯರ ಖಾತೆಗೆ 2 ಸಾವಿರ ರೂ. ಎಂದು ಹೇಳಿದ್ದರು. ಆದರೆ ರಾಜ್ಯದ ಅರ್ಧದಷ್ಟು ಮಹಿಳೆಯರಿಗೆ ಆ ಹಣ ಜಮಾ ಆಗಿಲ್ಲ. ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ 15 ಸಾವಿರ ರೂ. ಬೆಲೆ ನಿಗದಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಈಗ ಅವರೇ ಅಧಿಕಾರಕ್ಕೆ ಬಂದು 5-6 ತಿಂಗಳು ಕಳೆದಿದ್ದರೂ ಈ ಬಗ್ಗೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಟೀಕಿಸಿದರು.
ಈ ಬಾರಿ ನಮ್ಮ ದೇಶದಲ್ಲಿಯೇ ಅನ್ನಕ್ಕೆ ಕೊರತೆಯಾಗಲಿದೆ. ಇದಕ್ಕೆ ಕಾರಣ ಕೃಷಿಯಲ್ಲಿ ನೆಮ್ಮದಿ ಬದುಕನ್ನು ರೈತರಿಗೆ ನೀಡದಿರುವುದಾಗಿದೆ. ರೈತರ ಕಷ್ಟಗಳನ್ನು ಬಗೆಹರಿಸುವಂತಹ ವ್ಯಕ್ತಿಯನ್ನು, ನಿಮ್ಮ ಬದುಕನ್ನು ಸರಿಪಡಿಸುವವರನ್ನು ಮತದಾರರು ಆಯ್ಕೆ ಮಾಡಬೇಕು. ನೀವು ಯಾರನ್ನಾದರೂ ಆಯ್ಕೆ ಮಾಡಿ, ಆದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ ಎಂದರು.
ರಾಜಕೀಯ ಮರೆತು ಸಾಮರಸ್ಯದಿಂದಿರಿ: ರಾಜ್ಯದ ಜನರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ. ತದನಂತರ ರಾಜಕೀಯವನ್ನು ಮರೆತು ತಮ್ಮ ಬದುಕಿನ ಕಡೆ ಗಮನಕೊಡಿ. ಎಲ್ಲರೂ ಸಾಮರಸ್ಯದಿಂದ ಒಗ್ಗಟ್ಟಾಗಿ ಬದುಕಿ. ಒಬ್ಬರ ಕಷ್ಟಗಳಿಗೆ ಮತ್ತೊಬ್ಬರು ಆಗುವ ಮೂಲಕ ಮಾನವೀಯತೆಯನ್ನು ಜೀವಂತವಾಗಿರಿಸುವ ಕೆಲಸವಾಗಬೇಕಿದೆ ಎಂದರು.