

ಎಂ. ಹೈದರ್ ಕುಂದಾಣ
ಹೊಯ್ಸಳ ಕಾಲದ್ದು ಎಂದು ಹೇಳಲಾಗುವ ಕುಂದಾಣದ ಬೆಟ್ಟ ನಿರ್ವಹಣೆ ಕೊರತೆಯಿಂದಾಗಿ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಂಡು ಪೇಲವವಾಗಿದೆ. ಇತಿಹಾಸದ ಹೆಗ್ಗುರುತುಗಳು ಹಂತಹಂತವಾಗಿ ಅಳಿಸಿ ಹೋಗುತ್ತಿವೆ.
ಈ ಬೆಟ್ಟ ಹಿಂದೆ ಆಡಳಿತ ಕೇಂದ್ರವಾಗಿತ್ತು. ಏಕಶಿಲೆಯಲ್ಲಿ ನಿರ್ಮಾಣವಾಗಿರುವ ಬೆಟ್ಟದಲ್ಲಿ ಹಲವು ಪಾಳೆಗಾರರು ಆಡಳಿತ ಮಾಡಿದ ಕುರುಹುಗಳು ಇವೆ. 13ನೇ ಶತಮಾನದ ಅಂತ್ಯದಲ್ಲಿ ಹೊಯ್ಸಳ ದೊರೆ ರಾಮನಾಥ ಕುಂದಾಣವನ್ನು ರಾಜಧಾನಿಯಾಗಿ ಮಾಡಿಕೊಂಡು, ಬೆಟ್ಟದಿಂದ ಆಡಳಿತ ನಡೆಸಿದ್ದ ಎನ್ನಲಾಗುತ್ತದೆ.
ಬೌದ್ಧರು ನೆಲೆಸಿದ್ದ ಬೆಟ್ಟ: ಹೊಯ್ಸಳರ ಆಳ್ವಿಕೆಗೂ ಮೊದಲು ಬೌದ್ಧರು ನೆಲೆಸಿದ್ದರು ಎನ್ನಲು ಹಲವು ಪುರಾವೆಗಳು ಇಲ್ಲಿವೆ. ಬೌದ್ಧ ಸ್ತೂಪ, ಅಶೋಕ ಚಕ್ರದ ಕೆತ್ತನೆ, ಹಳೆಯ ಬೋಧಿವೃಕ್ಷದ ಕೆಳಗೆ ಬೌದ್ಧರು ಧ್ಯಾನ ಮಾಡಿರಬಹುದಾದ ಕುರುಹು ಕಾಣಿಸುತ್ತಿವೆ. ಬೋಧಿವೃಕ್ಷದ ಕೆಳಗಿರುವ ಅಶೋಕ ಚಕ್ರದ ಕೆತ್ತನೆಯಿರುವ ಶಿಲೆಯು ಈಗ ಗಿಡಗಂಟಿಗಳ ನಡುವೆ ಮರೆಯಾಗಿದೆ. ಗತಕಾಲದಲ್ಲಿ ಆದಿಮಾನವ ಆಹಾರ ತಯಾರಿಸಲು ಬಳಸಿರುವ ರುಬ್ಬುವ ಕಲ್ಲು ಕೂಡ ಇಲ್ಲಿದೆ. ಇಂತಹ ಐತಿಹ್ಯದ ತಾಣವನ್ನು ಅಭಿವೃದ್ಧಿಪಡಿಸಬೇಕಿದೆ.
ಇಚ್ಛಾಶಕ್ತಿ ತೋರಿ: ಕುಂದಾಣ ಬೆಟ್ಟದಲ್ಲಿ ಸೌಕರ್ಯ ಒದಗಿಸಿ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಿದರೆ, ಕುಂದಾಣದ ಭಾಗದಲ್ಲಿ ಆರ್ಥಿಕವಾಗಿ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಕಾರ ಇಚ್ಛಾಶಕ್ತಿ ತೋರಬೇಕಿದೆ.
ದೇವನಹಳ್ಳಿಯಿಂದ 10 ಕಿಮೀ ದೂರ: ಕುಂದಾಣ ಬೆಟ್ಟ ದೇವನಹಳ್ಳಿ ತಾಲೂಕು ಕೇಂದ್ರದಿಂದ 10 ಕಿಮೀ ದೂರದಲ್ಲಿದೆ. 61 ಮೀಟರ್ ಎತ್ತರವಿರುವ ಇದು ಇಳಿಜಾರಿನಿಂದ ಕೂಡಿದೆ. ಪೂರ್ವ ಮತ್ತು ಪಶ್ಚಿಮಾಭಿಮುಖದಲ್ಲಿ ಅಳಿಲಿನ ಆಕಾರದಲ್ಲಿ ಗೋಚರಿಸುತ್ತದೆ. ಬೆಟ್ಟವನ್ನು ಹತ್ತುವಾಗ ನಾಲ್ಕು ಕಲ್ಲಿನ ಕಂಬದ ಬಾಗಿಲು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಬೆಟ್ಟದಲ್ಲಿ ಹಲವು ಸ್ವಾಗತ ಕಮಾನುಗಳು ಇವೆ. ಚನ್ನರಾಯಸ್ವಾಮಿ, ಜನಾರ್ದನನ ದೇವಸ್ಥಾನಗಳ ಜತೆಗೆ ಒಂದು ಆಂಜನೇಯ ದೇಗುಲವೂ ಇದೆ. ಜನಾರ್ದನನ ವಿಗ್ರಹ ದೇವನಹಳ್ಳಿ ಪಾಳೆಗಾರರ ಕಾಲದ್ದಾಗಿದೆ. ಕ್ರಿ.ಶ.1547ರಲ್ಲಿ ದಯಾಳು ಬೈಚೇಗೌಡ ಜನಾರ್ದನ ದೇಗುಲ ನಿರ್ಮಿಸಿದ ಎಂದು ಹೇಳಲಾಗುತ್ತದೆ. ದೇವನಹಳ್ಳಿಯ ಪಾಳೆಯಪಟ್ಟು ಸ್ಥಾಪನೆಯಾಗುವ ಮೊದಲೇ ಕುಂದಾಣವು ಐತಿಹಾಸಿಕವಾಗಿ ತನ್ನದೇ ಆದ ಸ್ಥಾನಮಾನ ಹೊಂದಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕುಂದಾಣ ಬೆಟ್ಟ ಹೊಯ್ಸಳ ರಾಜ ರಾಮನಾಥನ ರಾಜಧಾನಿಯಾಗಿತ್ತು. ಅವತಿ ನಾಡಪ್ರಭುಗಳು ಕಟ್ಟಿದ ಚನ್ನರಾಯ ದೇಗುಲ ಬೆಟ್ಟದಲ್ಲಿದೆ. ಸಂಬಂಧಪಟ್ಟ ಇಲಾಖೆ ಬೆಟ್ಟದಲ್ಲಿ ಸೌಕರ್ಯ ಒದಗಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಬಿಟ್ಟಸಂದ್ರ ಗುರುಸಿದ್ದಯ್ಯ ಇತಿಹಾಸ ಸಂಶೋಧಕ