

ನೆಲಮಂಗಲ: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವ ಎಂದು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಂಸ್ಕೃತಿಕ ರಂಗ ಹಾಗೂ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾಜದ ಎಲ್ಲ ರಂಗಗಳಲ್ಲಿಯೂ ವಿಶಿಷ್ಟ ಛಾಪು ಮೂಡಿಸಿರುವ ಮಹಿಳೆಯರು, ಅಂತಾರಾಷ್ಟ್ರೀಯಮಟ್ಟದಲ್ಲೂ ಹೆಸರು ಮಾಡಬೇಕು. ಪುರಷರಷ್ಟೇ ಸಮಾನ ಅವಕಾಶ ನೀಡಿರುವ ಫಲವಾಗಿ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದರು.
ಅತ್ಯಾಚಾರ, ಆಸಿಡ್ ದಾಳಿ, ಬಾಲ್ಯವಿವಾಹದಂತಹ ಸಮಸ್ಯೆಗಳು ಇಂದಿಗೂ ಮಹಿಳಾ ಸಮುದಾಯವನ್ನು ಕಾಡುತ್ತಿವೆ. ಆದ್ದರಿಂದ ಮಹಿಳೆಯರು ನಿತ್ಯ ಪುಸ್ತಕ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹಬ್ಬದ ರೀತಿಯಲ್ಲಿ ಮಹಿಳಾ ದಿನಾಚಾರಣೆ ಮಾಡಬೇಕಿದೆ ಎಂದರು.
ಕಾಲೇಜು ಪ್ರಾಂಶುಪಾಲೆ ಡಿ.ಜಿ.ರೇಖಾ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಸ್ತ್ರೀಯರ ಪಾತ್ರ ಅತ್ಯಂತ ಮುಖ್ಯ. ಮಹಿಳಾ ಸಮುದಾಯದ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಅನಿತಾ, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾಗರತ್ಮಮ್ಮ, ರಾಜೇಶ್ವರಿ, ಅಂಗನವಾಡಿ ಶಿಕ್ಷಕಿ ಗಂಗಲಕ್ಷ್ಮಮ್ಮ, ಸಹಾಯಕಿ ಮುದ್ದಮ್ಮ, ಪೌರಕಾರ್ಮಿಕರಾದ ಪೋತಕ್ಕ, ಲಕ್ಷ್ಮೀನಾರಾಯಣಮ್ಮ, ಅಂಗವಿಕಲೆ ಸುಶೀಲಮ್ಮ, ಸಲ್ಮಾಫೈರೋಜ್, ನಗರ ಪೊಲೀಸ್ ಠಾಣೆ ಎಎಸ್‌ಐ ರತ್ನಮ್ಮ, ಪೇದೆ ಪದ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೇಣಿ ಶಿವಶಂಕರ್ ಅವರಿಂದ ಭರತನಾಟ್ಯ, ನಗರದ 10ಕ್ಕೂ ವಿವಿಧ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಾರ್ವತಿ, ಬಿಜೆಪಿ ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಸೌಮ್ಯ, ಶ್ರೀ ವಾಣಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಎಸ್.ಮಾಲತಿ, ಗ್ರಾಪಂ ಮಾಜಿ ಸದಸ್ಯರಾದ ನಾಗರತ್ಮಮ್ಮ, ಹನುಮಂತಮ್ಮ, ಕನ್ನಡ ಸಾಂಸ್ಕೃತಿಕ ರಂಗ ಪ್ರಧಾನ ಕಾರ್ಯದರ್ಶಿ ಎನ್.ಶಿವಕುಮಾರ್, ಕಾರ್ಯದರ್ಶಿ ಪಿ.ಗಿರಿಧರ್, ಜೀವನ್‌ರಂಗನಾಥ್, ಖಜಾಂಚಿ ಕೃಷ್ಣಪ್ಪ, ಮುಖ್ಯ ಸಲಹೆಗಾರ ವೆಂಕಟೇಶ್.ಆರ್.ಚೌಥಾಯಿ ಮತ್ತಿತರರು ಉಪಸ್ಥಿತರಿದ್ದರು. ಇದ್ದರು.