

ಬೆಳಗಾವಿ/ಇಟಗಿ: ಸರ್ಕಾರದಿಂದ ಅನುದಾನ ಬಿಡುಗಡೆಯಾಗುವುದು, ಅದು ಸಂಬಂಧಿಸಿದ ಸ್ಥಳೀಯ ಆಡಳಿತ ಸಂಸ್ಥೆ ತಲುಪುವುದು ದೊಡ್ಡ ಮಾತಲ್ಲ. ಆದರೆ, ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಂಡು ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಖಾನಾಪುರ ತಾಲೂಕಿನ ಬೀಡಿ ಗ್ರಾಮ ಗಮನ ಸೆಳೆಯುತ್ತಲಿದೆ.
ಗ್ರಾಮದ ಯಾವುದೇ ಭಾಗದಲ್ಲಿ ನೋಡಿದರೂ ಜನಾನುಕೂಲವಾಗುವಂತಹ ಅಭಿವೃದ್ಧಿ ಕಾಮಗಾರಿಗಳು ಕಾಣಸಿಗುತ್ತವೆ. ಈ ಹಿಂದೆ ಅತ್ಯವಶ್ಯ ಸೌಲಭ್ಯವೂ ಇಲ್ಲದೆ ಬಳಲುತ್ತಿದ್ದ ಗ್ರಾಮವೀಗ, ಪಟ್ಟಣ, ನಗರ ಮಾದರಿಯಲ್ಲಿ ಕಂಗೊಳಿಸುತ್ತಲಿದೆ.
ಮನ ಸೆಳೆವ ಗ್ರಾಪಂ ಕಟ್ಟಡ: ನರೇಗಾ ಯೋಜನೆಯಡಿ 18 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಗ್ರಾಪಂ ಕಟ್ಟಡ ನಿರ್ಮಿಸಿ, ಬಾಪೂಜಿ ಸೇವಾ ಕೇಂದ್ರ ತೆರೆಯಲಾಗಿದೆ. ಈ ಕಟ್ಟಡದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗೆ ಪ್ರತ್ಯೇಕ ಕೊಠಡಿ, ಉತ್ತಮ ಸಭಾಂಗಣವಿದೆ. ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿವಿಧ ಕೆಲಸಗಳ ನಿಮಿತ್ತ ಕಚೇರಿಗೆ ಬರುವ ಪ್ರತಿಯೊಬ್ಬರಿಗೆ ಟೀ ನೀಡುವ ವ್ಯವಸ್ಥೆ ಮಾಡಲಾಗಿದೆ. ಸುಂದರ ಉದ್ಯಾನವನ್ನೂ ಹೊಂದಿರುವ ಗ್ರಾಪಂ ಆವರಣ, ಹಸಿರಿನಿಂದ ನಳನಳಿಸುತ್ತಿದೆ.
ಬಾಲಸ್ನೇಹಿ ಅಂಗನವಾಡಿ ಕೇಂದ್ರ: 14ನೇ ಹಣಕಾಸು ಯೋಜನೆಯಡಿ ಉಳಿಕೆಯಾದ 4.30 ಲಕ್ಷ ರೂ. ಅನುದಾನದಲ್ಲಿ ಬೀಡಿ ಗ್ರಾಮದ ಎಂಟು ಕೇಂದ್ರಗಳನ್ನು ಬಾಲಸ್ನೇಹಿ ಅಂಗನವಾಡಿಯನ್ನಾಗಿ ಪರಿವರ್ತಿಸಲಾಗಿದೆ. ಪ್ರತಿ ಕೇಂದ್ರದ ಕಟ್ಟಡದ ಮೇಲೆ ಆಕರ್ಷಕ ಚಿತ್ರ ಬಿಡಿಸಲಾಗಿದೆ. ಪೀಠೋಪಕರಣ, ಕಲಿಕಾ ಸಾಮಗ್ರಿಗಳನ್ನೂ ವಿತರಿಸಿ, ಮಕ್ಕಳನ್ನು ಕೇಂದ್ರಗಳತ್ತ ಸೆಳೆಯಲಾಗುತ್ತಿದೆ.
ಎಲ್‌ಇಡಿ ದೀಪಗಳ ವ್ಯವಸ್ಥೆ: ಗ್ರಾಮದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಹಾಗೂ 480 ವಿದ್ಯುತ್ ಕಂಬಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲಾಗಿದೆ. 9 ಮೀಟರ್‌ಗಳಿಗೆ ಟೈಮರ್ ಅಳವಡಿಸಲಾಗಿದ್ದು, ನಿಗದಿತ ಸಮಯಕ್ಕಷ್ಟೇ ದೀಪ ಬೆಳಗುತ್ತಿವೆ. ಇಲ್ಲಿ ವಿದ್ಯುತ್ ಪೋಲಾಗುವ ಮಾತೇ ಇಲ್ಲ.
ಗಾಂಧಿ ಗ್ರಾಮ ಪುರಸ್ಕಾರ: ಕಸ ಸಂಗ್ರಹಕ್ಕಾಗಿ ಗ್ರಾಪಂ ವತಿಯಿಂದ ಪ್ರತಿ ಮನೆಗೆ ಎರಡು ಬುಟ್ಟಿ ವಿತರಿಸಲಾಗಿದೆ. ಗ್ರಾಪಂ ಸಿಬ್ಬಂದಿಯೇ ನಿತ್ಯ ಮನೆ-ಮನೆಗೆ ತೆರಳಿ, ಹಸಿ- ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. 20 ಲಕ್ಷ ರೂ. ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ. ಶುಚಿತ್ವಕ್ಕೆ ಒತ್ತು ನೀಡಿದ ಕಾರಣ 2017-18ರಲ್ಲಿ ಬೀಡಿ ಗ್ರಾಪಂಗೆ ಸರ್ಕಾರದಿಂದ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದೆ.
2,500 ರೂ. ಸಹಾಯಧನ: ಗ್ರಾಮದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ‘ಸಾರ್ಥಕ’ ಯೋಜನೆ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಸಮುದಾಯದ ವ್ಯಕ್ತಿ ಮೃತಪಟ್ಟರೂ, ಗ್ರಾಪಂ ಅಧಿಕಾರಿಗಳು ಅಥವಾ ಸದಸ್ಯರು ಕೂಡಲೇ ಮೃತರ ಮನೆಗೆ ತೆರಳಿ ಸಾಂತ್ವನ ಹೇಳುತ್ತಾರೆ. ಅಲ್ಲದೆ, 2,500 ರೂ. ಸಹಾಯಧನದ ಚೆಕ್ ವಿತರಿಸುತ್ತಾರೆ. ಈವರೆಗೆ 80 ಜನರಿಗೆ ಸಹಾಯಧನ ವಿತರಿಸಲಾಗಿದೆ.
ನೇರಪ್ರಸಾರಕ್ಕೆ ಚಿಂತನೆ: ಈ ಗ್ರಾಪಂನಲ್ಲಿ ಜರುಗುವ ಗ್ರಾಮಸಭೆಯನ್ನು ಸ್ಥಳೀಯವಾಗಿ ನೇರಪ್ರಸಾರ ಮಾಡುವ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಗ್ರಾಮಸ್ಥರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಗ್ರಾಪಂ ಸಿಬ್ಬಂದಿಗೆ ಶೀಘ್ರವೇ ವಾಕಿ-ಟಾಕಿ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದ್ದಾರೆ.
2020-21ನೇ ಸಾಲಿನಲ್ಲಿ 32 ಲಕ್ಷ ರೂ. ತೆರಿಗೆ ಸಂಗ್ರಹ ಗುರಿ ಹಾಕಿಕೊಳ್ಳಲಾಗಿತ್ತು. ಈ ಪೈಕಿ 30 ಲಕ್ಷ ರೂ. ಸಂಗ್ರಹವಾಗಿದೆ. ಪಾರದರ್ಶಕ ವ್ಯವಸ್ಥೆಗೆ ಒತ್ತು ನೀಡಲು ಬ್ಯಾಂಕ್ ಚಲನ್ ಮೂಲಕವೇ ತೆರಿಗೆ ಭರಿಸಿಕೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ 32 ಸಾವಿರ ಮಾನವ ದಿನಗಳ ಸೃಜನೆಗೆ ಸರ್ಕಾರ ಗುರಿ ನೀಡಿತ್ತು. ಆದರೆ, ಬೀಡಿ ಗ್ರಾಪಂನಲ್ಲಿ ಈವರೆಗೆ 35 ಸಾವಿರ ಮಾನವ ದಿನ ಸೃಜಿಸಿ ದುಡಿಯುವ ಕೈಗಳಿಗೆ ಹೆಚ್ಚಿನ ಕೆಲಸ ನೀಡಲಾಗಿದೆ. ನೀರು ಪೂರೈಕೆಗಾಗಿ ಗ್ರಾಮದ ಪ್ರತಿ ಮನೆಗೆ ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮೇಲಧಿಕಾರಿಗಳ ಮಾರ್ಗದರ್ಶನ, ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದಾಗಿ ಇಷ್ಟೊಂದು ಅಭಿವೃದ್ಧಿ ಸಾಧ್ಯವಾಗಿದೆ. ಬೀಡಿ ಗ್ರಾಪಂಗೆ ವ್ಯಾಪ್ತಿಗೆ ಬೀಡಿ, ಆಡಿ, ಗೋಲಿಹಳ್ಳಿ ಮತ್ತು ಹಿಂಡಲಗಿ ಗ್ರಾಮಗಳು ಬರುತ್ತವೆ. ಪ್ರಥಮ ಹಂತವಾಗಿ ಬೀಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ 1 ವರ್ಷದೊಳಗೆ ಇಡೀ ಗ್ರಾಪಂಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಪ್ರಯತ್ನ ನಡೆದಿದೆ.| ಗಣೇಶ ಕೆ.ಎಸ್. ಪಿಡಿಒ, ಬೀಡಿ ಗ್ರಾಪಂ
| ಇಮಾಮಹುಸೇನ್ ಗೂಡುನವರ ಬೆಳಗಾವಿ/ವಿವೇಕ ಕುರಗುಂದ ಇಟಗಿ