

ಜೇವರ್ಗಿ: ಪತ್ರಿಕೆಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸೇರಿ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡುವುದರ ಜತೆಗೆ ನೋವಿನಲ್ಲಿರುವವರ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಸಜ್ಜನ್ ಕಲ್ಯಾಣ ಮಂಟಪದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ಪ್ರಸಾರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಜತೆಗೆ ಪತ್ರಿಕಾ ರಂಗವೂ ಸೇರಿದೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದ್ದು, ಸರ್ಕಾರ ಹಾಗೂ ಜನರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪತ್ರಕರ್ತೆ ಸುಕನ್ಯಾ ಕೆ. ಉಪನ್ಯಾಸ ನೀಡಿ, ಇತ್ತೀಚೆಗೆ ಸ್ವಯಂ ಘೋಷಿತ ಪತ್ರಕರ್ತರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅರ್ಹರು ಯಾರು ಎಂಬುದು ತಿಳಿಯುತ್ತಿಲ್ಲ. ಮಾನವೀಯತೆ ಇಲ್ಲದ ಸುದ್ದಿಗಳು ಪ್ರಸಾರ ಮಾಡುತ್ತಾ ಎಲ್ಲರೂ ಮುಜುಗರ ಪಡುವಂತೆ ಮಾಡುತ್ತಿದ್ದಾರೆ. ಅಂಥವರಿಗೆ ಕಡಿವಾಣ ಹಾಕುವ ಕೆಲಸ ಆಗಬೇಕು. ಪತ್ರಿಕೋದ್ಯಮ ಜನರ ಧ್ವನಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಸ್ಥಳೀಯ ಪತ್ರಕರ್ತರು ಕಳೆದ ಕೆಲವು ವರ್ಷಗಳಿಂದ ಪತ್ರಕರ್ತರ ಭವನ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಈವರೆಗೂ ಈಡೇರಿಲ್ಲ. ಪರ್ತಕರ್ತರ ಬೇಡಿಕೆಗೆ ಸ್ಪಂದಿಸುವ ಕೆಲಸ ಆಗಬೇಕು. ಪತ್ರಿಕೆಗಳು ಜನರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡುತ್ತಿವೆ. ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರ ಎಂದು ಹೇಳಿದರು.
ಶಖಾಪುರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಮೇಶ ಆಲೂರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಕೇದಾರಲಿಂಗಯ್ಯ ಹಿರೇಮಠ, ತಹಸೀಲ್ದಾರ್ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಿಪಿಐ ರಾಜೇಸಾಬ್ ನದಾಫ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ್, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಕಾರ್ಯಕಾರಿಣಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಪ್ರಮುಖರಾದ ದೇವಿಂದ್ರಪ್ಪ ಕಪನೂರ, ದೇವಿಂದ್ರಪ್ಪ ಅವಂಟಿ, ಜಯತೀರ್ಥ ಪಾಟೀಲ್, ಶೇಷಮೂರ್ತಿ ಅವದಾನಿ, ಪ್ರಕಾಶ ಆಲಬಾಳ, ರವೀಂದ್ರ ವಕೀಲ, ಪುನೀತ ಕುಲಕರ್ಣಿ, ರೇವಣಸಿದ್ದಪ್ಪ ಹೆಗಡೆ, ಶರಣು ಬಡಿಗೇರ, ನಾಗರಾಜ ಶಾಬಾದಿ, ಶರಣು ನೇರಡಗಿ, ಸಿದ್ದು ಕಾಮನಕೇರಿ, ರಾಜು ಮುದ್ದಡಗಿ, ಗೌಸುದ್ದೀನ್ ಇನಾಮದಾರ, ವೆಂಕಟೇಶ ಹರವಾಳ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಪ್ರಕಾಶ ಹರನೂರ, ಲಕ್ಷ್ಮೀಕಾಂತ ಕುಲಕರ್ಣಿ, ವಿಶ್ವಾ ಆಲೂರ, ದೇವು ಬಡಿಗೇರ, ಅಬ್ದುಲ್ ರಹಿಮಾನ್ ಪಟೇಲ್, ಮರೆಪ್ಪ ಬಡಿಗೇರ, ಪುಂಡಲಿಕ ಗಾಯಕವಾಡ, ಭೀಮಾಶಂಕರ ಬಿಲ್ಲಾಡ, ಪರಮೇಶ ಬಿರಾಳ ಇತರರಿದ್ದರು.
ಸಾಧಕರಿಗೆ ಪುರಸ್ಕಾರ: ವಿಜಯವಾಣಿ ದಿನಪತ್ರಿಕೆ ಪ್ರಸಾರ ವಿಭಾಗದ ವ್ಯವಸ್ಥಾಪಕ ರೇವಣಸಿದ್ದ ಜವಳಿ ಸೇರಿ ನಾಗಶೆಟ್ಟಿ ಡಾಕೂಳಗಿ, ಶಿವಸಂಗಪ್ಪ ಅಗಸಿಬಾಗಿಲು, ಬಸವರಾಜ ಮಕ್ದುಮ್, ಜಯಪ್ರಕಾಶ ಅಡೂರ, ಸಿದ್ಧಾರೂಡ ಬಿರಾದಾರ, ಚಂದ್ರಕಾಂತ ದೇಸಾಯಿ ಅವರಿಗೆ ಪತ್ರಿಕಾ ಪ್ರಸಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಿಕೆ ಮತ್ತು ಪತ್ರಕರ್ತರು ಜನಹಿತ ಕಾಯುವ ದೃಷ್ಟಿಕೋನದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಪತ್ರಕರ್ತರಿಗೆ ಮುಂದಿನ ಪತ್ರಿಕಾ ದಿನಾಚರಣೆ ಒಳಗಾಗಿ ನಿವೇಶನ ನೀಡಲು ಶ್ರಮಿಸಲಾಗುವುದು.
| ಡಾ.ಅಜಯಸಿಂಗ್ ಅಧ್ಯಕ್ಷ, ಕೆಕೆಆರ್‌ಡಿಬಿ
ಇಂದು ಪತ್ರಿಕೋದ್ಯಮ ಉದ್ಯಮವಾಗಿ ಬದಲಾಗುತ್ತಿದ್ದು, ಸುಳ್ಳು ಸುದ್ದಿಗಳು ವಿಜೃಂಭಿಸುತ್ತಿವೆ. ಪತ್ರಿಕೋದ್ಯಮ ಸಾರ, ಉದ್ದೇಶ ಅರ್ಥಮಾಡಿಕೊಳ್ಳಬೇಕು. ಅಂದಾಗ ಸಮಾಜ ಬದಲಾವಣೆ ಸಾಧ್ಯ. ಪತ್ರಕರ್ತರ ಬೇಡಿಕೆಗಳಿಗೆ ಆಡಳಿತ ನಡೆಸುವುವವರು ಸ್ಪಂದಿಸಬೇಕು.
| ಸುಕನ್ಯಾ ಕೆ., ಪತ್ರಕರ್ತೆ