

ಔರಾದ್: ಇಂದಿನ ದಿನಮಾನದಲ್ಲಿ ಪತ್ರಕರ್ತರು ಹಲವಾರು ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ಪಟ್ಟಣದ ಪತ್ರಿಸ್ವಾಮಿ ಪಿಯುಸಿ ಕಾಲೇಜಿನಲ್ಲಿ ಸುಭಾಷಚಂದ್ರ ಬೋಸ್ ಯುವಕ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಅಭಿವೃದ್ಧಿ ಪರ ವಿಚಾರಗಳಿಗೆ ಒತ್ತು ನೀಡಬೇಕು. ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಪತ್ರಿಕೆಗಳ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಮಾಜಿ ಶಾಸಕ ಗುಂಡಪ್ಪ ಬಿರಾದಾರ ಮಾತನಾಡಿ, ಪತ್ರಕರ್ತರು ಮೂಲ ಸೌಲಭ್ಯಗಳಿಲ್ಲದೆ ದಿನವಿಡೀ ಕೆಲಸ ಕಾರ್ಯಗಳನ್ನು ಮಾಡುವ ಜತೆಗೆ ಸಮಾಜದ ಬದಲಾವಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಎಲ್ಲ ಇಲಾಖೆಗಳ ಯೋಜನೆಗಳು ಜನರ ಬಾಗಿಲಿಗೆ ಮುಟ್ಟಿಸುವಂತಹ ಕೆಲಸ ಪತ್ರಿಕೆಗಳು ಮಾಡುತ್ತಿವೆ. ಪತ್ರಿಕೆಗಳ ವರದಿಯಿಂದ ಅನೇಕ ಬದಲಾವಣೆಗಳು ಆಗುತ್ತಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶಶಿಕಾಂತ ಎಸ್.ಶೇಂಬೆಳ್ಳಿ ವಿಶೇಷ ಉಪನ್ಯಾಸ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಅನಿಲಕುಮಾರ ದೇಶಮುಖ ಮಾತನಾಡಿದರು. ಸುಭಾಷಚಂದ್ರ ಬೋಸ್ ಯುವಕ ಸಂಘದ ತಾಲೂಕು ಅಧ್ಯಕ್ಷ ರತದೀಪ ಕಸ್ತೂರೆ ಪ್ರಾಸ್ತಾವಿಕ ಮಾತನಾಡಿದರು.
ಬಿಸಿಎಂ ಅಧಿಕಾರಿ ರವೀಂದ್ರ ಮೇತ್ರೆ, ಪತ್ರಕರ್ತರಾದ ಜಾನಸನ್ ಘೋಡೆ, ಚನ್ನಬಸವ ಮೊಕ್ತೆದಾರ್, ಮನ್ಮಥಪ್ಪ ಸ್ವಾಮಿ, ಮಲ್ಲಪ್ಪ ಗೌಡ, ರವೀಂದ್ರ ಮೊಕ್ತೆದಾರ್, ಅಮರೇಶ್ವರ ಚಿದ್ರೆ, ಹಣಮಂತ ದೇಶಮುಖ, ಸುಧೀರ ಪಾಂಡ್ರೆ, ಅಹ್ಮದ್ ಜಂಬಗಿ, ಶಿವಕುಮಾರ ಸಾದುರೆ, ರವಿಕುಮಾರ ಶಿಂಧೆ, ರಾಚಯ್ಯ ಸ್ವಾಮಿ, ಸೂರ್ಯಕಾಂತ ಎಕಲಾರ, ಅಂಬಾದಾಸ ನಳಗೆ, ಪ್ರಭುಲಿಂಗ ಸ್ವಾಮಿ ಇತರರಿದ್ದರು. ಅಮರ ಸ್ವಾಮಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಅಖಿಲ್ ವಂದಿಸಿದರು.