

ಮಾಗಡಿ: ಶಾಸಕ ಎ.ಮಂಜುನಾಥ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಂಕಿಅಂಶ ಇಟ್ಟುಕೊಂಡು ಮಾತನಾಡಲಿ ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಚರ್ಚಿಸುವುದಾದರೆ ಸಿದ್ಧನಿದ್ದೇನೆ. ಚರ್ಚೆಗೆ ಬಾರದೆ ಬಾಯಿಗೆ ಬಂದಂತೆ ಮಾತನಾಡುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ನಿತ್ಯ ಎರಡು ಗಂಟೆ ಪಕ್ಷ ಸಂಘಟನೆ ಮಾಡಿ ಆಡಳಿತ ನಡೆಸುತ್ತಿರುವವರ ಬಗ್ಗೆ ತಮ್ಮ ಪಕ್ಷದಲ್ಲೇ ಭ್ರಮನಿರಸ ಉಂಟಾಗಿದೆ. ನಾನು ಜೆಡಿಎಸ್‌ನಲ್ಲಿದ್ದಾಗ ಸಕ್ರಿಯನಾಗಿ ಕೆಲಸ ಮಾಡಿದವನು. ಕಾರ್ಯಕರ್ತರಿಗೆ ವಿವಿಧ ಸ್ಥಾನಗಳನ್ನು ಕೊಡಿಸಲು ಸಾಧ್ಯವಾಗದಿದ್ದಾಗ ಜೆಡಿಎಸ್ ತೊರೆದೆ ಎಂದರು.
ಕಾಂಗ್ರೆಸ್ ಜಾತ್ಯತೀತ ಪಕ್ಷ. ಕೇಂದ್ರದ ಸಬ್‌ಕೆ ಸಾತ್, ಸಬ್‌ಕೆ ವಿಕಾಸ್ ಏನಾಯಿತು? ಗ್ರಾಮದಲ್ಲಿ ಮುನಿಸಿಕೊಂಡವರ ಮನೆ ಬಾಗಿಲಿಗೆ ನನ್ನನ್ನು ಕರೆದುಕೊಂಡು ಹೋಗಿ, ತಾಲೂಕಿನಲ್ಲಿ ಹೆಣ್ಣು ಮಕ್ಕಳು ಸೇರಿ 40 ಸಾವಿರ ಸದಸ್ಯತ್ವ ಮಾಡಿಸಿ. ಅಭಿಯಾನ ಯಶಸ್ವಿಗೊಳಿಸಿ. ಪಕ್ಷದ ತತ್ವ, ಸಿದ್ದಾಂತ, ಆಸಕ್ತಿ ಹೊಂದಿದವರನ್ನು ಸದಸ್ಯತ್ವ ಮಾಡಿಸಿ ಎಂದರು.
ಕಾರ್ಯಕರ್ತರಿಗೆ ಬಹುಮಾನ: ಒಂದು ಜಿಪಂ ವ್ಯಾಪ್ತಿಯಲ್ಲಿ ಹೆಚ್ಚು ಸದಸ್ಯತ್ವ ಮಾಡಿಸುವ ಕಾರ್ಯಕರ್ತರಿಗೆ 50 ಸಾವಿರ ರೂ. ಪ್ರಥಮ ಬಹುಮಾನ 2ನೇ ಬಹುಮಾನ 30 ಸಾವಿರ ರೂ. 3ನೇ ಬಹುಮಾನವಾಗಿ 20 ಸಾವಿರ ರೂ. ಹಾಗೂ ಬೂತ್ ಮಟ್ಟದಲ್ಲಿ 300 ಸದಸ್ಯತ್ವ ಮಾಡಿಸುವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಬಾಲಕೃಷ್ಣ ೋಷಿಸಿದರು.
ಈಶ್ವರಪ್ಪ ವಿರುದ್ಧ ವಾಗ್ದಾಳಿ: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದರೆ ಏನರ್ಥ. ಈಶ್ವರಪ್ಪ ದೇಶದ್ರೋಹಿಯಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಅಲ್ಪಸಂಖ್ಯಾತರು ಬುರ್ಕಾ ಹಾಕುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದಮೇಲೆ ಹಾಕುತ್ತಿಲ್ಲ. ಅವರ ಸಂಪ್ರದಾಯದಂತೆ ಹಾಕಿಕೊಳ್ಳುತ್ತಿದ್ದಾರೆ. ಇಲ್ಲದನ್ನು ಹುಡುಕುವುದು ಬೇಡ, ಇದು ಬಿಜೆಪಿ ಬಿತ್ತಿದ ಬೀಜ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ತಾಪಂ ಮಾಜಿ ಅಧ್ಯಕ್ಷ ಜಿ.ಕೃಷ್ಣ, ಸಿ.ಜಯರಾಮು, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್, ಸೀಗೆಕುಪ್ಪೆ ಶಿವಣ್ಣ ಇತರರಿದ್ದರು.