

ಕೊಳ್ಳೇಗಾಲ: ವರ್ಷಗಳು ಉರುಳಿದರೂ ಅಭಿವೃದ್ಧಿಗೊಳ್ಳದ ರಸ್ತೆ….. ಚಾಲನೆ ನೀಡಿದ್ದರೂ ಪ್ರಾರಂಭಗೊಳ್ಳದ ಕಾಮಗಾರಿ, ಅಡಿಗಡಿಗೂ ಹಳ್ಳ-ಕೊಳ್ಳವಿರುವ ರಸ್ತೆಯಲ್ಲಿ ಜೀವ ಭಯದಲ್ಲೇ ಸಂಚರಿಸಬೇಕಾದ ಪರಸ್ಥಿತಿ ಇಲ್ಲಿಯ ಜನರದ್ದು…
ಕೊಳ್ಳೇಗಾಲ ವೇಗವಾಗಿ ಬೆಳೆದ ಪಟ್ಟಣ. 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳ. ವಾಣಿಜ್ಯೋದ್ಯಮಕ್ಕೆ ಹೆಸರುವಾಸಿ. ಇನ್ನೂ ಹೇಳಬೇಕೆಂದರೆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ತನ್ನದೆ ವಿಶೇಷತೆ ಪಡೆದಿರುವ ಪಟ್ಟಣವಾಗಿದೆ.
ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ನಡೆದ ಯುಜಿಡಿ ಕಾಮಗಾರಿ ಮತ್ತು 24*7 ಕುಡಿಯುವ ನೀರಿನ ಕಾಮಗಾರಿಗಳ ನಿರ್ವಹಣೆಯಿಂದಾಗಿ ಇಲ್ಲಿರುವ ಬಡಾವಣೆ ಹಾಗೂ ಪ್ರಮುಖ ರಸ್ತೆಗಳನ್ನು ಕಿತ್ತು, ತೋಡಿ ಹಾಕಲಾಗಿತ್ತು. ನಂತರ ಜನರ ಅಕ್ರೋಶದ ಒತ್ತಾಯದಿಂದ ಇತ್ತೀಚೆಗೆ ಅಲ್ಲಲ್ಲಿ ಪ್ಯಾಚ್ ಅಪ್ ಕಾಮಗಾರಿ, ರಸ್ತೆ ನಿರ್ಮಾಣ ನಡೆಯುತ್ತಿದ್ದರೂ ಅದರಲ್ಲಿ ಸಮರ್ಪಕತೆ ಕಾಣಲು ಸಾಧ್ಯವಾಗಿಲ್ಲ.
ದೇವಾಂಗ ಪೇಟೆ ಪಟ್ಟಣಕ್ಕೆ ಹೆಸರುವಾಸಿಯಾಗಿರುವ ಬಡಾವಣೆಯಾಗಿದ್ದು ಬಸ್ ನಿಲ್ದಾಣಕ್ಕೂ ಹತ್ತಿರವಿರುವ ಸ್ಥಳವಾಗಿದೆ. ಆದರೆ ದೇವಾಂಗ ಪೇಟೆಯ ಪಂಚರಂಗಿ ಸರ್ಕಲ್‌ನಿಂದ ರಾಷ್ಟ್ರೀಯ ಹೆದ್ದಾರಿ(209) ಸಂಪರ್ಕಿಸುವ ಅಚ್ಗಾಳ್ ಯಾತ್ರಿ ನಿವಾಸ್ ವೃತ್ತದವರೆಗೂ ರಸ್ತೆ ಅಭಿವೃದ್ಧಿಪಡಿಸಲು ಹಲವು ವರ್ಷಗಳಿಂದಲೂ ಸಾಧ್ಯವಾಗಿಲ್ಲ ಎಂಬುದು ನಿವಾಸಿಗಳ ಅಕ್ರೋಶದ ನುಡಿ.