

ಮಳವಳ್ಳಿ: ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆಯರು ಪ್ರಸ್ತುತ ಪುರುಷರ ಸಮಾನವಾಗಿ ಸಮಾಜದ ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದು ತಹಸೀಲ್ದಾರ್ ಡಾ. ಎಸ್.ವಿ.ಲೋಕೇಶ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಕೇಂದ್ರ ಸಂವಹನ ಇಲಾಖೆ, ತಾಲೂಕು ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗ ದೊಂದಿಗೆ ಬುಧವಾರ ಆಯೋಜಿಸಿದ್ದ ಪೋಷಣ ಮಾಸಾಚರಣೆ ಹಾಗೂ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ ಮಾಸಾಚರಣೆಗೆ ಕೇಂದ್ರ ಸರ್ಕಾರ ಬಹಳ ಮಹತ್ವವನ್ನು ನೀಡಿ ಮಹಿಳೆಯ ಸಶಕ್ತೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಸಂವಿಧಾನದ ಆಶಯ ಹಾಗೂ ಗಾಂಧಿ ಕಂಡ ಕನಸು ನನಸಾಗುತ್ತಿರುವ ಕಾಲಮಾನವನ್ನು ಪ್ರಸ್ತುತ ಕಾಣಬಹುದಾಗಿದೆ. ಹೆಣ್ಣು ವಿದ್ಯೆ ಕಲಿಯುವ ಮೂಲಕ ಪುರುಷ ಪ್ರಧಾನವಾಗಿದ್ದ ಬಹಳಷ್ಟು ದುಡಿಮೆಯ ಕ್ಷೇತ್ರಗಳಲ್ಲಿ ತಾವುಗಳು ಸಬಲರು ಎಂಬುದನ್ನು ಸಾಬೀತುಪಡಿದ್ದಾರೆ. ಕುಟುಂಬ ನಿರ್ವಹಣೆಯ ಜತೆಗೆ ಆರ್ಥಿಕ ಸ್ವಾವಲಂಬಿತನವನ್ನು ಕಟ್ಟಿಕೊಳ್ಳುತ್ತಿರುವುದು ದೇಶದ ಅಭಿವೃದ್ಧಿಗೆ ಸಾರಥಿಗಳಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಂವಹನ ಇಲಾಖೆಯ ಮೈಸೂರಿನ ಕ್ಷೇತ್ರ ಪ್ರಚಾರ ಅಧಿಕಾರಿ ಎಸ್.ಟಿ.ಶ್ರುತಿ ಮಾತನಾಡಿ, ಪೋಷಣ ಮಾಸಾಚರಣೆ ಮೂಲಕ ದೇಶಾದ್ಯಂತ ಮಹಿಳೆಯರಲ್ಲಿ ಆರೋಗ್ಯ ಹಾಗೂ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಸುವುದರ ಜತೆಗೆ ನಶೆಮುಕ್ತ ಭಾರತ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ, ಆರ್ಥಿಕ ಸಾಕ್ಷರತೆ ಸಂಯೋಜಕ ವಿನೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.