

ಪಾಂಡವಪುರ: ಮೂರು ಬಾರಿ ಶಾಸಕನಾಗಿ, ಒಮ್ಮೆ ಸಂಸದ, ಸಚಿವನಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿರುವ ನಾನು ವಿರೋಧಿಗಳಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. 50 ಸಾವಿರ ಲೀಡ್‌ನಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಹಾರೋಹಳ್ಳಿಯ ಹೊರವಲಯದಲ್ಲಿರುವ ಹೊಸಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕ್ಯಾತನಹಳ್ಳಿ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಚುನಾವಣೆಯಲ್ಲೂ 10 ಸಾವಿರ ಲೀಡ್ ಕೊಡುತ್ತಿದ್ದ ದುದ್ದ ಹೋಬಳಿಯವರು 2023ರ ಚುನಾವಣೆಯಲ್ಲಿ 15 ಸಾವಿರ ಲೀಡ್ ಕೊಟ್ಟು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಲಿದ್ದಾರೆ. ಕ್ಯಾತನಹಳ್ಳಿ ಜಿಪಂ ವ್ಯಾಪ್ತಿಯ ಜನರು ನನಗೆ ಹಿಂದಿನಿಂದಲೂ ಆಶೀರ್ವಾದ ಮಾಡಿದ್ದಾರೆ. ಚಿನಕುರಳಿ ಜಿಪಂ ವ್ಯಾಪ್ತಿಯಲ್ಲಿ ಏರುಪೇರಾದರೂ ಕ್ಯಾತನಹಳ್ಳಿ ಜಿಪಂ ವ್ಯಾಪ್ತಿಯಲ್ಲಿ ಒಂದೊಂದು ಮತಗಳನ್ನು ಹೆಚ್ಚಾಗಿ ನೀಡುವ ಮೂಲಕ ಪ್ರೀತಿ ತೋರಿಸಿದ್ದಾರೆ. ಬೇರೆಯವರ ರೀತಿ ಕದ್ದು ಹೋಗುವ ಪ್ರಶ್ನೆ ಇಲ್ಲ ಎಂದರು.
ಕ್ಯಾತನಹಳ್ಳಿ ಜಿ.ಪಂ ವ್ಯಾಪ್ತಿ ಆಸ್ಪತ್ರೆ ಮೇಲ್ದರ್ಜೆ, ಪದವಿ ಕಾಲೇಜು ಮಂಜೂರು, ಎಲೆಕೆರೆ ಆದರ್ಶ ಶಾಲೆ, ಕಟ್ಟೇರಿ ಕೆಜಿಬಿವಿ ಶಾಲೆ, ಶ್ಯಾದನಹಳ್ಳಿ ಚೆಕ್ ಡ್ಯಾಂ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. 100 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಪುಟ್ಟರಾಜುಗೆ ಹೆಸರು ಬರುತ್ತೆ ಎಂದು ರೈತ ಸಂಘದವರು ಸೇತುವೆ ನಿರ್ಮಾಣಕ್ಕೆ ಅಡ್ಡಿಪಡಿಸಿದರು. ಪಕ್ಷಿಧಾಮಕ್ಕೆ ತೊಂದರೆಯಾಗುತ್ತದೆ ಎಂದು ಸೀತಾಪುರದ ಬಳಿ ಸೇತುವೆ ನಿರ್ಮಾಣದ ವಿಚಾರದಲ್ಲಿ ದೂರು ನೀಡಿದರು. ಆದರೆ, ಅದ್ಯಾವುದೂ ನಡೆಯಲಿಲ್ಲ ಎಂದು ಗುಡುಗಿದರು.
2003ರಲ್ಲಿ ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರು ರೈತ ಸಂಘದ ಕೆ.ಎಸ್.ನಂಜುಂಡೇಗೌಡರನ್ನೇ ಪಿಎಸ್‌ಎಸ್‌ಕೆ ಅಧ್ಯಕ್ಷರಾಗಿಸಿ ಅವರ ಕೈಯಲ್ಲೇ ಬೀಗ ಹಾಕಿಸಿದರು. 2004ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಬಂದು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಅಂದಿನ ಸಿಎಂ ಧರ್ಮಸಿಂಗ್ ಅವಧಿಯಲ್ಲಿ ಚೆನ್ನೈ ಮೂಲದ ಕೊಠಾರಿ ಷುಗರ್ಸ್‌ಗೆ 7 ವರ್ಷಕ್ಕೆ 87ಕೋಟಿ ರೂ.ಗೆ ಮೊದಲ ಬಾರಿಗೆ ಖಾಸಗಿಗೆ ವಹಿಸಿ ಸಾಲ ತೀರುವಿಕೆಗೆ ಮುಂದಾಗಿದ್ದೆ. ಆದರೆ, ರೈತಸಂಘದವರು 2 ವರ್ಷ ಕೂಡ ನಡೆಯಲು ಬಿಡಲಿಲ್ಲ. ಕಾರ್ಖಾನೆ ಮುಚ್ಚಿಸುವ ಹುನ್ನಾರ ನಡೆಯಿತು. ಬಳಿಕ ಮಂತ್ರಿಯಾದ ವೇಳೆ ಕ್ಯಾಬಿನೆಟ್‌ನಲ್ಲಿ ಟೆಂಡರ್‌ಗೆ ಇರಿಸಿದ್ದೆ. ನಂತರ 405 ಕೋಟಿ ರೂ.ಗೆ ನಿರಾಣಿಯವರು ಗುತ್ತಿಗೆ ಪಡೆದು ಕಾರ್ಖಾನೆ ಚೆನ್ನಾಗಿ ನಡೆಯುತ್ತಿದೆ. ಪಿಎಸ್‌ಎಸ್ ಕಾರ್ಖಾನೆ ಚಾಲನೆ ಮಾಡಿಸಿದ್ದವರು ಯಾರಾದರೂ ಇದ್ದರೆ ಅದು ನಿಮ್ಮ ಮನೆ ಮಗ ಪುಟ್ಟರಾಜು ಮಾತ್ರ ಎಂಬುದನ್ನು ಮನಗಾಣಬೇಕು ಎಂದರು.