

ರಾಮನಗರ: ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರು ಮಾನವೀಯ ನೆಲೆಯಲ್ಲಿ ಅನ್ನದಾನ, ವಿದ್ಯಾದಾನ ಹಾಗೂ ವಸತಿ ನೀಡಿ ಬಡ ಮಕ್ಕಳಿಗೆ ಜ್ಞಾನದ ಜ್ಯೋತಿಯಾದರು, ಸಮಾಜದಲ್ಲಿ ದೇವರಾದರು ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಎಂ.ಎಸ್. ಶಿವಕುಮಾರ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ, ದಾಸೋಹ ದಿನ ಹಾಗೂ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ಮಾಗಡಿ ತಾಲೂಕಿನ ವೀರಾಪುರದವರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಿ ಸಮಾಜ ಹಾಗೂ ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದಾರೆ. ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ರೂಪಿಸಿದರು. ಇವರು ಮಾಡಿರುವ ಸಮಾಜ ಸೇವೆ ಪ್ರತಿಯೊಬ್ಬರಿಗೂ ಮಾದರಿ ಎಂದರು.
ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಶಿವಶರಣ ಹಾಗೂ ವಚನಕಾರ. ಜಾತಿ ವ್ಯವಸ್ಥೆ, ಮೂಢನಂಬಿಕೆ, ಮೌಢ್ಯಗಳ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ತಿಳಿಸಿದರು. ಜನಸಾಮಾನ್ಯರು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ದುಡಿಮೆಯಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಸಬೇಕು ಎಂದು ತಿಳಿಸಿಕೊಟ್ಟವರು ಎಂದರು.
ಕೆಚ್ಚೆದೆಯ ವಚನಕಾರ: ಅಂಬಿಗರ ಚೌಡಯ್ಯ ಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದರು. ತಪ್ಪು ಮಾಡಿದವರನ್ನು ಟೀಕಿಸದೆ ಬಿಡುತ್ತಿರಲಿಲ್ಲ. ಇವರನ್ನು ಕೆಚ್ಚೆದೆಯ ವಚನಕಾರ ಎಂದು ಸಹ ಕರೆಯಲಾಗುತ್ತದೆ. ಅವರ ವಚನಗಳು ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುತ್ತವೆ. ಅಂಬಿಗ ವೃತ್ತಿಯಲ್ಲಿ ಜೀವನ ನಡೆಸುತ್ತಿದ್ದ ಇವರು ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಇವರ ಹಲವಾರು ವಚನಗಳು ಆಧುನಿಕ ಪರಿಕಲ್ಪನೆಯನ್ನು ಹೊಂದಿವೆ. ಅವರ ವಚನಗಳು ಇಂದಿಗೂ ಜೀವನದ ಪಾಠವನ್ನು ಹೇಳುತ್ತವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕೆಂಪರಾಜು ಹೇಳಿದರು.
ಅಂಬಿಗರಚೌಡಯ್ಯ ಜಯಂತಿ ಹಾಗೂ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಮಾಡಿ ಜನರಿಗೆ ಮಹಾನ್ ವ್ಯಕ್ತಿಗಳ ಜೀವನದ ಪರಿಚಯ ಮಾಡಿಕೊಡುತ್ತಿರುವುದು ಸಂತೋಷದ ವಿಷಯವಾಗಿದೆ. ಅಂಬಿಗರ ಚೌಡಯ್ಯ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು. ದೋಣಿ ನಡೆಸುವುದು ಅಂಬಿಗರ ಚೌಡಯ್ಯ ಅವರ ಕಾಯಕ. ಇದರಿಂದ ಬಂದ ಹಣದಲ್ಲಿ ಸಮಾಜಸೇವೆ ಮಾಡುತ್ತಿದ್ದರು. ಕುಷ್ಠ ರೋಗ, ಹಾವು ಕಡಿತ ಹೀಗೆ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ನಿವೃತ್ತ ಶಿಕ್ಷಕ ರಾಮು ತಿಳಿಸಿದರು.
ಮುಖಂಡರಾದ ಈಶ್ವರ್ ಅವರು ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಿಸುವಂತೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಚೌ.ಪು. ಸ್ವಾಮಿ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಅಂಕನಹಳ್ಳಿ ಪಾರ್ಥ ಕಾರ್ಯಕ್ರಮ ನಿರೂಪಿಸಿದವರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲಾ, ರೇಷ್ಮೆ ಇಲಾಖೆ ಅಧಿಕಾರಿ ಸಂದೀಪ್ ಇತರರು ಹಾಜರಿದ್ದರು.