

ಚಿಟಗುಪ್ಪ: ಲಕ್ಷಾಂತರ ಭಕ್ತರನ್ನು ಹೊಂದಿರುವ ಸುಕ್ಷೇತ್ರ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೂಲ ಸೌಲಭ್ಯ ಒದಗಿಸುವುದರ ಜತೆಗೆ ಅಭಿವೃದ್ಧಿ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಭಕ್ತರ ಸಹಕಾರವೂ ಮುಖ್ಯ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಚಾಂಗಲೇರಾ ಗ್ರಾಮದಲ್ಲಿ ಸೋಮವಾರ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸೇರಿ ತೆಲಂಗಾಣ, ಮಹಾರಾಷ್ಟçದ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಈ ಪುಣ್ಯ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಮಾಡಬೇಕೆಂಬ ಉದ್ದೇಶ ಹೊಂದಿದ್ದೇನೆ. ಇದಕ್ಕೆ ಎಲ್ಲರ ಸಹಾಯ ಸಹಕಾರು ಮುಖ್ಯ ಎಂದರು.
ನಾನಾ ಯೋಜನೆಯಡಿ ಹಾಗೂ ಭಕ್ತರ ಸಹಕಾರದಿಂದ ಮಂದಿರವೂ ಅಭಿವೃದ್ಧಿಯತ್ತ ಸಾಗುತ್ತಿದ್ದು, ಮಂದಿರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಬರುವ ಭಕ್ತರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸಲಾಗಿದ್ದು ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ಕೆಲ ದಿನಗಳಲ್ಲಿ ಜಾತ್ರೋತ್ಸವವೂ ಆರಂಭವಾಗಲಿದ್ದು, ಎಲ್ಲರೂ ಕೈ ಜೋಡಿಸಿ ಮಾದರಿ ಉತ್ಸವವನ್ನಾಗಿಸೋಣ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿದರು. ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ವೀರಪ್ಪ ಪೂಜಾರಿ, ಪ್ರಮುಖರಾದ ವಿಜಯಕುಮಾರ ವಾಲಿ, ರಾಜಶೇಖರ ಮಳ್ಳಿ, ರವಿ ಘಾರೆಲ, ನರೇಶ ಥೊಂಟಿ, ವಿ.ಕೆ.ಪೂಜಾರಿ, ಪರಮೇಶ್ವರ ಪೂಜಾರಿ, ಶಿವಕುಮಾರ ಸಾಲಿ, ರಮೇಶ ಮಳ್ಳಿ, ಶಿವಶಂಕರ ಮಠ, ಮಲ್ಲಯ್ಯ ಸಾಲಿ, ಚಂದ್ರಶೇಖರ ಬಿರಾದರ, ಜಗನಾಥ ಬೆಡರ, ಪಿಎಸ್‌ಐ ನಿಂಗಪ್ಪ ಮಣ್ಣೂರ ಇತರರಿದ್ದರು.
ವೀರಭದ್ರೇಶ್ವರ ಮಹಿಮೆ ಅಪಾರವಾಗಿದ್ದು , ಮಂದಿರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವೆ. ನಮ್ಮ ತಂದೆ ದಿ.ಬಸವರಾಜ ಪಾಟೀಲ್, ಸಹೋದರ, ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಈ ಭಾಗದ ಅವಿನಾವಭಾವ ಸಂಬಂಧವಿದೆ. ದೇವಸ್ಥಾನದ ಅಭಿವೃದ್ಧಿಗೆ ಸದಾ ಸಹಾಯ ಸಹಕಾರ ನೀಡಲಾಗುವುದು.
| ಭೀಮರಾವ ಪಾಟೀಲ್ ಎಂಎಲ್‌ಸಿ