

ಅರಸೀಕೆರೆ: ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ಜಾವಗಲ್ ಗ್ರಾಮದ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬೆಟ್ಟದಾಲೂರು ಹಾಗೂ ಬಿಕ್ಕೋಡು ಹೋಬಳಿಯಲ್ಲಿ ತಲಾ 24 ಕೋಟಿ ರೂ. ವೆಚ್ಚದ ವಸತಿ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನರಸೀಪುರ ಗ್ರಾಮದ ಬಳಿ ನಿರ್ಗತಿಕ ಮಕ್ಕಳ ಅನುಕೂಲಕ್ಕಾಗಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲೆ ಆರಂಭಿಸಲು ಹಸಿರು ನಿಶಾನೆ ತೋರಲಾಗಿದೆ. ಜಾವಗಲ್ ಹೋಬಳಿಯಲ್ಲಿ ಶಾಲಾ ಕಟ್ಟಡಗಳ ನಿರ್ಮಾಣದ ಜತೆಗೆ ಕುಡಿಯುವ ನೀರು, ಎತ್ತಿನಹೊಳೆ ಯೋಜನೆ ಅನುಷ್ಠಾನ, ರಸ್ತೆ, ಚರಂಡಿ ನಿರ್ಮಾಣ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಶ್ರಮಿಸುತ್ತಿದ್ದೇನೆ ಎಂದರು.
ಲೋಕೋಪಯೋಗಿ ಇಲಾಖೆಯ ಎಇಇ ಮುನಿರಾಜು, ಎಇ ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಮಮತಾ, ಪ್ರಾಂಶುಪಾಲೆ ವಿಜಯಲಕ್ಷ್ಮೀ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.