

ಹುಬ್ಬಳ್ಳಿ: ಆರ್ಥಿಕ ಶಿಸ್ತು, ನೈತಿಕತೆ ಮತ್ತು ವಿಶ್ವಾಸ ಇಲ್ಲದೇ ಹೋದರೆ ಯಾವುದೇ ಸಂಸ್ಥೆ, ಕಂಪನಿ, ಬ್ಯಾಂಕ್, ಸರ್ಕಾರಗಳಾಗಲೀ ಅಭಿವೃದ್ಧಿ ಹೊಂದುವುದು ಅಸಾಧ್ಯ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.
ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಸಂಸ್ಥೆ ವತಿಯಿಂದ ಮಂಗಳವಾರ ತಮಗೆ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಉದ್ಯಮದಲ್ಲಿ ಹಣಕಾಸಿನ ನಿರ್ವಹಣೆ ಬಹಳ ಮಹತ್ವದ್ದು. ಕೆಲ ಉದ್ಯಮಿಗಳು, ಬ್ಯಾಂಕ್ಗಳು ಆರ್ಥಿಕ ಕಾರಣದಿಂದ ನೆಲಕಚ್ಚಿದ ಉದಾಹರಣೆಗಳಿವೆ. ಇದಕ್ಕೆ ಆರ್ಥಿಕ ಶಿಸ್ತು, ನಿರ್ವಹಣೆಯಲ್ಲಿ ಎಡವಿರುವುದು ಮತ್ತು ಗ್ರಾಹಕರ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಕಾರಣ ಎಂದ ಅವರು, ಆರ್ಥಿಕ ಹಿಂಜರಿತದಲ್ಲೂ ಅಭಿವೃದ್ಧಿ ಹೊಂದುವುದು ಹೇಗೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು.
ಕೆಲವರು 10 ಕೋಟಿ ಆಸ್ತಿ ಇದ್ದರೂ ಎರಡು ಕೋಟಿ ರೂ. ಸಾಲಕ್ಕೆ ಆತಂಕ ಪಡುತ್ತಾರೆ. ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಾಲ ಎಷ್ಟೇ ಇದ್ದರೂ ಅದರ ನಿರ್ವಹಣೆ ಮಾಡಬೇಕು. ಇದು ಆರ್ಥಿಕ ಶಿಸ್ತಿನಿಂದ ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಹದಗೆಟ್ಟಾಗಲೆಲ್ಲ ಒಂದೊಂದು ಪಾಠ ಕಲಿತಿದ್ದೇನೆ. ಹಾಗಾಗಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಹೇಗೆ ಎಂಬುದರ ಅರಿವಾಗಿದೆ. ಆರ್ಥಿಕ ಹಿಂಜರಿತದ ಈ ಸಂದರ್ಭದಲ್ಲಿ ಹಲವು ಉದ್ಯಮಗಳು ಶೇ. 15- 20ರಷ್ಟು ಆರ್ಥಿಕ ಕುಸಿತ ಕಂಡಿವೆ. ಆದರೆ, ವಿಆರ್ಎಲ್ ಕಂಪನಿ ಶೇ. 6ರಷ್ಟು ಬೆಳವಣಿಗೆ ಕಂಡಿದೆ. ಆರ್ಥಿಕ ಹಿಂಜರಿತವನ್ನು ಉದ್ಯಮಿಗಳು ಸವಾಲಾಗಿ ಸ್ವೀಕರಿಸಬೇಕು. ಇಂಥ ಸಮಯ ಮತ್ಯಾವಾಗಲೂ ಸಿಗುವುದಿಲ್ಲ ಎಂದರು.
ಕೋಟಿಗೊಬ್ಬರಿಗೆ ಅವಕಾಶ: ವಿಆರ್ಎಲ್ ಸಂಸ್ಥೆಗೆ ನೂರಾರು ಪ್ರಶಸ್ತಿ, ಗೌರವಗಳು ಲಭಿಸಿವೆ. ಆದರೆ, ಕೇಂದ್ರ ಸರ್ಕಾರ ನೀಡಿದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ‘ನಿಮಗೆ’ (ಹಿತೈಷಿಗಳಿಗೆ) ಬಂದಿದೆ. ಪ್ರಶಸ್ತಿ ಘೋಷಿಸಿದಾಗ ದೇಶಾದ್ಯಂತದ ಲಕ್ಷಾಂತರ ಜನ ಫೋನ್ ಮಾಡಿ, ಪತ್ರ ಬರೆದು, ಕೆಲವರು ಸಮಕ್ಷಮ ಭೇಟಿಯಾಗಿ ಶುಭ ಕೋರಿದರು. ಅವರೆಲ್ಲರ ಮುಖದಲ್ಲಿ ಒಂದೇ ಭಾವ ಇತ್ತು. ಈ ಪ್ರಶಸ್ತಿ ಖಂಡಿತ ವಿಜಯ ಸಂಕೇಶ್ವರರಿಗೆ ಸಿಕ್ಕಿದ್ದಲ್ಲ. ಅದು ತಮಗೇ ಸಿಕ್ಕಿದ್ದು ಎಂಬ ಸಂತೋಷ ಅವರಲ್ಲಿತ್ತು. ವಾಣಿಜ್ಯೋದ್ಯಮ ಸಂಸ್ಥೆಯಲ್ಲೂ ಅಷ್ಟೇ, ಪದ್ಮಶ್ರೀ ನಮಗೇ ಸಿಕ್ಕಿದ್ದು ಎಂಬ ಸಂತೋಷದಿಂದ ಸನ್ಮಾನಿಸಿದ್ದೀರಿ, ಹಾಗೆ ನೋಡಿದರೆ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರಾಗಿರುವ ನೀವು ನಮ್ಮ ಅನ್ನದಾತರು ಎಂದು ಡಾ. ವಿಜಯ ಸಂಕೇಶ್ವರ ಕೃತಜ್ಞತಾ ಭಾವದಿಂದ ಹೇಳಿದರು.
ವಾಣಿಜ್ಯೋದ್ಯಮಿಗಳು, ಗ್ರಾಹಕರು ಹಾಕಿದ ಅನ್ನವನ್ನು ನಮ್ಮ ಸಂಸಾರ ಅಷ್ಟೇ ಅಲ್ಲ; ಸಂಸ್ಥೆಯ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸ್ವೀಕಾರ ಮಾಡುತ್ತಾರೆ. ನಾನು ನಿಮ್ಮ ಸೇವಕ. ಸೇವಕನಿಗೆ ಇಂತಹ ಸನ್ಮಾನ ಸಿಕ್ಕಿರುವುದು ನನ್ನ ಸೌಭಾಗ್ಯ. ಇಂಥ ಭಾಗ್ಯ ಕೋಟಿ, ಹತ್ತು ಕೋಟಿ, ಶತಕೋಟಿಗೊಬ್ಬರಿಗೆ ಸಿಗುತ್ತದೆ. ನಿಮ್ಮ ಋಣಭಾರ, ಪ್ರೀತಿ ವಿಶ್ವಾಸವನ್ನು ಎಷ್ಟು ಜನ್ಮ ಎತ್ತಿದರೂ ತೀರಿಸಲು ಆಗುವುದಿಲ್ಲ ಎಂದು ಮನದಾಳವನ್ನು ಬಿಚ್ಚಿಟ್ಟರು.
ಒಂದು ಲಾರಿಯಿಂದ ಆರಂಭವಾದ ಉದ್ಯಮ 5000 ವಾಹನಗಳ ದೊಡ್ಡ ಸಂಸ್ಥೆಯಾಗಿ ಬೆಳೆಯಲು ತಾವು ಪಟ್ಟ ಶ್ರಮ, ಪ್ರಾಮಾಣಿಕ ಕರ್ತವ್ಯದ ಬಗ್ಗೆ ಸವಿಸ್ತಾರವಾಗಿ ಅವರು ಹಂಚಿಕೊಂಡರು. ನಾನೇನು ದೊಡ್ಡ ಸಾಧನೆ ಮಾಡಿಲ್ಲ. ತಮ್ಮೆಲ್ಲರ ಆಶೀರ್ವಾದದಿಂದ ಒಂದು ಮಟ್ಟಕ್ಕೆ ಬೆಳೆದಿದ್ದೇನೆ. ಮಾ. 26ರಂದು ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಿಮ್ಮೆಲ್ಲರ ಪರವಾಗಿ ಸ್ವೀಕರಿಸಲಿದ್ದೇನೆ ಎಂದರು.
ಘೊಡಗೇರಿ ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ಮನುಷ್ಯನೊಬ್ಬ ಕಾಲು ದಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ ಮಾಡುವುದು ಸುಲಭವಲ್ಲ. ಆದರೆ, ಡಾ. ವಿಜಯ ಸಂಕೇಶ್ವರ ಅವರು ಇಂಥ ಹೆದ್ದಾರಿ ನಿರ್ವಿುಸಿದರು. ಸಾರಿಗೆ ಉದ್ಯಮದಲ್ಲಿ ಹೆಸರು ಮಾಡಿ, ಅದೆಷ್ಟೋ ಕುಟುಂಬಗಳಿಗೆ ಅನ್ನದಾತರಾದರು. ಇಂಥ ಸಾಧಕನಿಗೆ ಸನ್ಮಾನ ಮಾಡುತ್ತಿರುವುದು ಖುಷಿಯ ವಿಚಾರ. ಅದೂ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರಿಂದ ಸನ್ಮಾನಿಸಿಕೊಳ್ಳುವ ಭಾಗ್ಯ ಲಭಿಸಿರುವುದು ಪುಣ್ಯ. ಸಂಕೇಶ್ವರ ಅವರ ಯಶಸ್ಸಿನ ಜೀವನ ಭಗವಂತನ ಪ್ರೀತಿಗೆ ಪಾತ್ರವಾಗಿದೆ ಎಂದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನಾ ಪತ್ರ ನೀಡಿ ಡಾ. ವಿಜಯ ಸಂಕೇಶ್ವರ ಹಾಗೂ ಲಲಿತಾ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು.
ಗೋಕುಲ ಆನಂದ ಆಶ್ರಮದ ಶ್ರೀ ಚಿದ್ರೂಪಾನಂದ ಸ್ವಾಮೀಜಿ, ಸುತ್ತೂರು ಮಠದ ಕಿರಿಯ ಶ್ರೀ ಜಯರಾಜೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಸಂಸ್ಥೆಯ ಸಿ.ಬಿ. ಪಾಟೀಲ, ವಿ.ಪಿ. ಲಿಂಗನಗೌಡರ, ವಸಂತ ಲದ್ವಾ, ರಮೇಶ ಪಾಟೀಲ, ಡಿ.ಎಸ್. ಗುಡ್ಡೋಡಗಿ, ಸಿದ್ದೇಶ್ವರ ಕಮ್ಮಾರ, ಇತರರು ಭಾಗವಹಿಸಿದ್ದರು. ಅಪರ್ಣಾ ದೀಕ್ಷಿತ ಪ್ರಾರ್ಥಿಸಿದರು. ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಸಿಸಿಐ ಗೌರವ ಕಾರ್ಯದರ್ಶಿ ಅಶೋಕ ಗಡಾದ ವಂದಿಸಿದರು. ಉಪನ್ಯಾಸಕಿ ಭಾಗ್ಯಜ್ಯೋತಿ ಹಿರೇಮಠ ನಿರೂಪಿಸಿದರು.
ಮತ್ತೆ ನಂಬರ್ ಒನ್: ಮಾಧ್ಯಮ ಕ್ಷೇತ್ರಕ್ಕೆ ಬಂದು ಪತ್ರಿಕೆಯೊಂದನ್ನು ನಂಬರ್ ಒನ್ ಮಾಡಿದೆ. ಸಂಕಷ್ಟ ಬಂದಾಗ ಅದನ್ನು ಮಾರಿದೆ. ಐದು ವರ್ಷಗಳ ನಂತರ ‘ವಿಜಯವಾಣಿ’ ಆರಂಭಿಸಿದೆ. ಓದುಗರ ನಾಡಿಮಿಡಿತ ನನಗೆ ಗೊತ್ತಿತ್ತು. ಕೆಲವೇ ವರ್ಷದಲ್ಲಿ ವಿಜಯವಾಣಿ ಮೊದಲಿದ್ದ ನಂಬರ್ ಒನ್ ಪತ್ರಿಕೆಯನ್ನು ಹಿಂದೆ ಸರಿಸಿತು. ದೇಶದ ಇತಿಹಾಸದಲ್ಲಿ ಭಾಷಾ ಪತ್ರಿಕೆಯೊಂದರ ಈ ಸಾಧನೆ ದಾಖಲೆಯಾಗಿದೆ. ಇದಕ್ಕೆಲ್ಲ ಓದುಗರು, ಸಿಬ್ಬಂದಿ, ಹಿತೈಷಿಗಳ ಹಾರೈಕೆ ಕಾರಣ ಎಂದು ಡಾ. ಸಂಕೇಶ್ವರ ಹೇಳಿದರು.