

ಬೀದರ್: ಜಾತಿ, ಧರ್ಮದ ಹೆಸರಲ್ಲಿ ರಾಜಕಾರಣ ಸಲ್ಲದು. ಇದರ ಬದಲಾಗಿ ಸಂವಿಧಾನ ಬಯಸಿದ ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಅಡಿ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ರಾಜಕೀಯ ಮಾಡಿ ಎಂದು ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಡಾ. ವಿಶ್ವನಾಥ ಜಿ.ಪಿ. ಹೇಳಿದರು.
ಇಲ್ಲಿನ ಪಟ್ಟದ್ದೇವರು ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಆಡಳಿತರೂಢ ಸರ್ಕಾರಗಳು ಜಾತಿ, ಧರ್ಮವನ್ನು ಬದಿಗಿಟ್ಟು ಹಿಂದುಳಿದ ಜನರ ಅಭಿವೃದ್ಧಿಗಾಗಿ ದುಡಿಯಬೇಕಿದೆ ಎಂದರು.
ವಿಶ್ವ ಕನ್ನಡಿಗರ ಸಂಸ್ಥೆ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಂಸ್ಥೆ ಸಕ್ರಿಯವಾಗಿ ಸಮಾಜಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಂಗಲಾ ಮರಕಲೆ, ಗೌರಿಶಂಕರ ಪರ್ತಾಪುರೆ, ಧೂಳಪ್ಪ ಮೂಡಬಿ, ರಿಯಾಜಪಾಶಾ ಕೊಳ್ಳುರ್, ಡಾ.ರಮೇಶ ಮೂಲಗೆ, ಸಚಿನ್ ಮಲ್ಕಾಪುರೆ, ಭೀಮಸೇನರಾವ್ ಕಾನಿಹಾಳ, ಕಾರ್ತಿಕ್ ರೆಡ್ಡಿ, ಧನರಾಜ ಮುಸ್ತಾಪುರೆ, ಶಿವಪುತ್ರ ಮಾಳಗೆ, ಡಾ. ಪ್ರವೀಣರೆಡ್ಡಿ, ಸುನೀಲ ಕಡ್ಡೆ, ಸ್ವಾಮಿದಾಸ ಕೆಂಪೆನೋರ್, ಸೂರ್ಯಕಾಂತ ಸಾಧುರೆ, ಆನಂದಕುಮಾರ, ಸಾಯಿ ಸಿಂಧೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 65 ಸಾಧಕರಿಗೆ ರಾಜ್ಯೋತ್ಸವ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಶ್ರೀದೇವಿ ಹೂಗಾರ, ಶಂಕರ ದೊಡ್ಡಿ ಮಾತನಾಡಿದರು. ಪೂಜ್ಯ ಧಮ್ಮಾನಂದ ಭಂತೆ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಶಂಕರಗೌಡ, ಮೋಹನಕುಮಾರ, ಸುದರ್ಶನ, ಕೃಷ್ಣಪ್ಪ, ವಿಜಯಕುಮಾರ ಸೋನಾರೆ, ಕೆ.ಡಿ. ಗಣೇಶ, ಕಾಮಶೆಟ್ಟಿ ಘೋಡಂಪಳ್ಳಿ, ಮುಖೇಶ ಶಹಾಗಂಜ್ ಇತರರಿದ್ದರು. ರತ್ನದೀಪ ಕಸ್ತೂರೆ ನಿರೂಪಣೆ ಮಾಡಿದರು.