

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಮಗ್ರ ಅಭಿವೃದ್ಧಿ ಮತ್ತು ಹಣಕಾಸಿನ ಸಂಪನ್ಮೂಲ ಲಭ್ಯತೆ ದೃಷ್ಟಿಯಿಂದ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅಗತ್ಯ ಎಂದು ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ. ಎನ್.ಜಿ. ಚಚಡಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯಿಂದ ಭಾನುವಾರ ಏರ್ಪಡಿಸಿದ್ದ ‘ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು-ಅವಶ್ಯಕತೆ ಮತ್ತು ಅರ್ಹತೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕಾಶಿ ಎಂದು ಹೆಸರಾದ ಧಾರವಾಡದ ಬೆಳವಣಿಗೆಗೆ ತಕ್ಕಂತೆ ನಾಗರಿಕ ಸೌಕರ್ಯ ನೀಡುವುದು ಪಾಲಿಕೆ ಜವಾಬ್ದಾರಿ. ಆದರೆ ಪ್ರಸ್ತುತ ದಿನಗಳಲ್ಲಿ ಜನರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಪರಿಹಾರ ಸಿಗುತ್ತಿಲ್ಲ. ಪಾಲಿಕೆಗೆ ಸರ್ಕಾರ ನೀಡುವ ಅನುದಾನದಲ್ಲಿ ಹುಬ್ಬಳ್ಳಿಗೇ ಹೆಚ್ಚಿನ ಪಾಲು ಸಿಗುತ್ತಿದೆ. ಒಂದು ರೀತಿ ಹು-ಧಾ ಮಹಾನಗರ ಪಾಲಿಕೆ ಹುಬ್ಬಳ್ಳಿಗೆ ಸೀಮಿತ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಹಣಕಾಸಿನ ಸ್ಥಿತಿಗತಿ ಕುರಿತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಅಧ್ಯಯನ ನಡೆಸಿದ್ದು, ಅದಕ್ಕೆ 4 ವರ್ಷಗಳ ಆಯವ್ಯಯ ಆಧಾರವಾಗಿಟ್ಟುಕೊಳ್ಳಲಾಗಿದೆ. ಅಧ್ಯಯನದ ವರದಿಯಲ್ಲಿ ಪಾಲಿಕೆಗೆ ವಾರ್ಷಿಕ ಒಟ್ಟು ಆದಾಯ ಶೇ. 50- 60ರಷ್ಟು ಸರ್ಕಾರದ ಅನುದಾನ ರೂಪದಲ್ಲಿ, ಶೇ. 15-16 ತೆರಿಗೆ ರೂಪ, ಶೇ. 10-11ರಷ್ಟು ಶುಲ್ಕ, ದಂಡ, ಸೇವಾ ಶುಲ್ಕದ ರೂಪದಲ್ಲಿ ಬರುತ್ತದೆ. ಇದಲ್ಲದೆ ಆದಾಯ ಮೂಲ ಹೆಚ್ಚಿಸಿಕೊಳ್ಳಲು ಪಾಲಿಕೆಗೆ ಸಾಕಷ್ಟು ಅವಕಾಶಗಳಿವೆ. ಆದಾಗ್ಯೂ ಧಾರವಾಡಕ್ಕೆ ಸೂಕ್ತ ಸೌಲಭ್ಯ ಸಿಗದೆ ಅಭಿವೃದ್ಧಿಯಿಂದ ಮರೀಚಿಕೆಯಾಗಿದೆ ಎಂದರು.
ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಮಾತನಾಡಿ, ಪಾಲಿಕೆ ಎಂದು ಪ್ರಕಟಿಸಲು ನಗರ ಪ್ರದೇಶ 3 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರಬೇಕು. ಒಟ್ಟು ಜನಸಂಖ್ಯೆಯ ದುಡಿಮೆಗಾರರಲ್ಲಿ ಶೇ. 50ರಷ್ಟು ಕಡಿಮೆ ಕೃಷಿಯೇತರ ಸಂಖ್ಯೆ ಇರಬಾರದು. ನಿಯೋಜಿತ ಪಾಲಿಕೆ ಆದಾಯ ವಾರ್ಷಿಕ 6 ಕೋಟಿ ರೂ.ಗಿಂತ ಕಡಿಮೆ ಆಗಿರಬಾರದು. ಆಡಳಿತ ವಿಕೇಂದ್ರೀಕರಣ ಮತ್ತು ಅಧಿಕಾರ ವಿಕೇಂದ್ರೀಕರಣದ ಪ್ರಾಯೋಜಿಕತೆಯಲ್ಲಿ ನಗರಾಡಳಿತಗಳು ಚಿಕ್ಕದಾದಷ್ಟು ಸಮರ್ಥವಾಗುತ್ತವೆ. ಜಿಲ್ಲೆಗಳ ವಿಂಗಡಣೆಯಂತೆ ನಗರಾಡಳಿತಗಳೂ ವಿಂಗಡನೆ ಆಗಬೇಕು ಎಂದು ಪ್ರತ್ಯೇಕ ಪಾಲಿಕೆ ಕೆಲ ಮಾನದಂಡಗಳನ್ನು ವಿವರಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಎಸ್. ಪಟಗುಂಡಿ ಮಾತನಾಡಿ, ಪ್ರತ್ಯೇಕ ಪಾಲಿಕೆ ಬೇಡಿಕೆ ಪ್ರತಿಪಾದಿಸುವವರು ಮತ್ತು ಅದರಲ್ಲಿ ನಂಬಿಕೆ ಹೊಂದಿದವರು ಸಾರ್ವಜನಿಕರು. ಪ್ರಜಾಪ್ರಭುತ್ವದಲ್ಲಿ ನಾಗರಿಕ ಸಮಾಜದ ಬೇಡಿಕೆ ಈಡೇರಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಧಾರವಾಡ ನಾಗರಿಕರಿಗೆ ಅಗತ್ಯವಾದ ಪ್ರತ್ಯೇಕ ಪಾಲಿಕೆ ಸ್ಥಾಪಿಸಬೇಕು ಎಂದರು.
ಡಾ. ಪಿ.ಎ. ಪೊಲೀಸ್ ಪಾಟೀಲ ಮಾತನಾಡಿ, 2021ರಲ್ಲಿ ಹಿರಿಯ ನಾಗರಿಕರು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಸ್ಥಾಪಿಸಿ ಮಹತ್ತರ ಉದ್ದೇಶದೊಂದಿಗೆ ಹೋರಾಟಕ್ಕೆ ನಾಂದಿ ಹಾಡಿದ್ದಾರೆ. ಇದಕ್ಕೆ ಹಿರಿಯ ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೋರಾಟ ವೇದಿಕೆ ಪಕ್ಷಾತೀತವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಬೆಂಬಲಿಸಿದ್ದಾರೆ. 30 ಸಂಘ- ಸಂಸ್ಥೆಗಳೂ ಬೆಂಬಲಿಸಿವೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆಯ ಮನೋಜ ಪಾಟೀಲ, ವೆಂಕಟೇಶ ಮಾಚಕನೂರ, ಜಿ.ಎಸ್. ಬ್ಯಾಡಗಿ, ಎಂ.ಬಿ. ಕಟ್ಟಿ, ರವಿ ಮಾಳಗೇರ, ಪಿ.ಎಚ್. ನೀರಲಕೇರಿ, ಗುರುರಾಜ ಹುಣಸಿಮರದ, ನಗರದ ಜನರು, ಇತರರು ಇದ್ದರು.