ಅಭಿವೃದ್ಧಿ ಹೊಂದುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿ: ಬಿ.ಎ ಜಗದೀಶ್

ಅಭಿವೃದ್ಧಿ ಹೊಂದುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿ: ಬಿ.ಎ ಜಗದೀಶ್
Published on

ಹಾಸನ : ಎಲ್ಲಾ ಸಮುದಾಯಗಳು ಅಭಿವೃದ್ಧಿ ಹೊಂದುವ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್ ಅವರು ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಗ್ರಾಮದ ಅಭಿವೃದ್ಧಿ ನಿಟ್ಟಿನಲ್ಲಿ ರಸ್ತೆ, ಚರಂಡಿ, ಕೆರೆಗಳ ಅಭಿವೃದ್ಧಿ ಜೊತೆಗೆ ಗ್ರಾಮದ ಪ್ರತಿಯೊಂದು ಕುಟುಂಬದ ವ್ಯಕ್ತಿಗಳು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.

ಎಲ್ಲಾ ಸಮುದಾಯಗಳು ಅಭಿವೃದ್ಧಿ ಹೊಂದಲು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರಾದ ಆರ್.ಎಸ್. ಮಹೇಶ್ ಮಾತನಾಡಿ, ಅಗ್ನಿಬನ್ನಿರಾಯ ಸ್ವಾಮಿಗಳ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲು ಮನವಿ ಮಾಡಿದಂತೆ ಅವಕಾಶ ಸಿಕ್ಕಿದೆ. ಕ್ಷತ್ರಿಯ ಸಮಾಜದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಇದ್ದು, ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳುವ ಅಗತ್ಯತೆ ಇದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕಾಗಿ ವಿಶೇಷ ಅನುದಾನವನ್ನು ನೀಡಿ ಅವರ ಅಭ್ಯುದಯಕ್ಕೆ ಸರ್ಕಾರ ಶ್ರಮಿಸುತ್ತಿದೆ. ಕೃಷಿಯಾಧರಿತ ಕಸುಬುದಾರರಿಗೆ ವಿಶೇಷ ಘಟಕ ಯೋಜನೆಯಡಿ ಅನುದಾನ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಈ. ಕೃಷ್ಣೇಗೌಡ, ಸಮಾಜ ಸೇವಕರಾದ ಜಿ.ಓ. ಮಹಾಂತಪ್ಪ, ಸಮುದಾಯದ ಜಿಲ್ಲಾಧ್ಯಕ್ಷ ಚನ್ನೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net