

ಸಾಗರ: ಬಣ್ಣ ಬಣ್ಣದ ಚಿಟ್ಟೆಗಳು ನಮ್ಮಿಂದ ದೂರ ಸರಿಯುತ್ತಿವೆ. ನಿಧಾನವಾಗಿ ಅಪರೂಪದ ಸಂತತಿಗಳೇ ನಾಶವಾಗುತ್ತಿವೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಮಂಜುನಾಥ ಹೆಗಡೆ ಹೊಸಬಾಳೆ ಆತಂಕ ವ್ಯಕ್ತಪಡಿಸಿದರು.
ಗುರುವಾರ ಎಲ್‌ಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಜೀವ ವೈವಿಧ್ಯತೆಯ ಮಹತ್ವ ಹಾಗೂ ಮಾದರಿ ಪ್ರದರ್ಶನದಲ್ಲಿ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮಳೆ ಕಾಡುಗಳು ನಾಶವಾಗುತ್ತಿವೆ. ಅನೇಕ ಚಿಟ್ಟೆಯ ಪ್ರಬೇಧಗಳು ಅವನತಿ ಅಂಚಿನಲ್ಲಿವೆ. ಅಭಿವೃದ್ಧಿ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಪ್ರಪಂಚದಲ್ಲಿ ಇನ್ನೆಲ್ಲೂ ಕಾಣಸಿಗುವುದಿಲ್ಲ. ಇಲ್ಲಿಯ ಕೀಟಗಳು, ಪಕ್ಷಿ, ಪ್ರಾಣಿಗಳು ಭೂಮಿ ಮತ್ತು ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸಿವೆ. ಈ ಪ್ರದೇಶದಲ್ಲಿ ಬೆಳೆಯುವ ಸೊಪ್ಪು, ಎಲೆ, ಮರ, ಗಿಡ, ಕೊಂಬೆ ಎಲ್ಲವೂ ದಿವ್ಯೌಷಧಿಯ ಗುಣವುಳ್ಳವು ಎಂದರು.
ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೊಠಡಿಯನ್ನು ಮೀರಿದ ಪ್ರಕೃತಿ ಮತ್ತು ಪರಿಸರದ ಸೂಕ್ಷ್ಮ ಸಂಗತಿಗಳನ್ನು ತಿಳಿದುಕೊಳ್ಳುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಅಧ್ಯಯನ ನಡೆಸಿದ ಸ್ಥಳಗಳಲ್ಲಿ 256ಕ್ಕೂ ಹೆಚ್ಚು ಚಿಟ್ಟೆಯ ಪ್ರಬೇಧಗಳನ್ನು ಸಂಗ್ರಹಿಸಿದ್ದೇನೆ ಎಂದು ಹೇಳಿದ ಅವರು, ಅಷ್ಟು ಚಿಟ್ಟೆಗಳ ಪ್ರಬೇಧದ ಕುರಿತು ವಿವರಣೆ ನೀಡಿದಾಗ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಹರನಾಥ ರಾವ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಓದಿನ ಜತೆಯಲ್ಲಿ ಪರಿಸರದ ಮಹತ್ವವನ್ನು ಗಂಭೀರವಾಗಿ ಅಭ್ಯಾಸ ಮಾಡಬೇಕಾದ ಅವಶ್ಯಕತೆಯಿದೆ. ಮನುಷ್ಯ ಸದಾ ಜೀವನ್ಮುಖಿಯಾಗಿರಬೇಕು, ಜನಮುಖಿಯಾಗಿ ತೊಡಗಿಕೊಳ್ಳಬೇಕು. ಪರಿಸರ ಎಲ್ಲವನ್ನು ಕಲಿಸುತ್ತದೆ ಎಂದರು.
ಕುವೆಂಪು ವಿವಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್ ಮಾತನಾಡಿ, ಪರಿಸರ ಮತ್ತು ಸಸ್ಯ ಜೀವಸಂಕುಲಗಳ ನಾಶಕ್ಕೆ ಸರ್ಕಾರ ಮಾತ್ರ ಕಾರಣವಲ್ಲ, ನಮ್ಮ ಹೊಣೆಯೂ ಇದೆ. ಮನುಷ್ಯನಲ್ಲಿ ದುರಾಸೆ ಹೆಚ್ಚಾಗಿ ಅಪರೂಪವಾದದ್ದAನ್ನು ಕಳೆದುಕೊಳ್ಳುತ್ತಿದ್ದೇವೆ. ಪರಿಸರದ ಉಳಿವಿಗೆ ಸರ್ಕಾರ ಸಾಕಷ್ಟು ಹಣವನ್ನು ವ್ಯಯಮಾಡುತ್ತದೆ. ಆದರೆ ಅದು ಫಲ ಕಾಣುವಲ್ಲಿ ವ್ಯವಸ್ಥಿತವಾಗಿದೆಯೇ ಎನ್ನುವ ಅವಲೋಕನಗಳು ಕೂಡ ನಡೆಯಬೇಕು ಎಂದರು.