ಅಭಿವೃದ್ಧಿ ಹೆಸರಿನಲ್ಲಿ ಮರಕಡಿತಕ್ಕೆ ಕಳವಳ

mysore
Published on

ಮೈಸೂರು: ಅಭಿವೃದ್ಧಿ ಮರಗಳ ಹನನ ಸರಿಯಲ್ಲ. ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಡಾ.ಟಿ.ಎಸ್.ಹರ್ಷ ಹೇಳಿದರು.

ಹೈದರ್ ಅಲಿ ರಸ್ತೆಯಲ್ಲಿ ಮರಗಳ ಹನನ ಮಾಡಿರುವ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಪರಿಸರ ಬಳಗದ ವತಿಯಿಂದ ವಿಶ್ವ ಭೂ ದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ‘ಪರಿಸರದಿಂದ ನಾವು; ಪರಿಸರಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಮಾತನಾಡಿದರು

ಹವಾಮಾನವೇ ಪರಿವರ್ತನೆಯಾಗುತ್ತಿದೆ. ಸಮರ್ಪಕವಾಗಿ ಮಳೆ ಆಗುತ್ತಿಲ್ಲ. ಕಾರಣ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು. ಇಂತಹ ಸಂದರ್ಭದಲ್ಲಿ ಮರಗಳ ಸಂರಕ್ಷಣೆ, ಅವುಗಳ ಬೆಳೆಸುವುದು ಕರ್ತವ್ಯವಾಗಬೇಕೇ ಹೊರತು, ಅವುಗಳ ಹನನವಲ್ಲ ಎಂದು ಹೇಳಿದರು.

ಪ್ರಕೃತಿಯ ಮತ್ತೊಂದು ಮುಖ್ಯವಾದ ಸಂಪನ್ಮೂಲ ಎಂದರೆ ಸೂಕ್ಷ್ಮಾಣು ಜೀವಿಗಳು. ಯಾವುದೇ ಜೀವಿ ಸತ್ತಾಗ ಅವುಗಳು ಕೊಳೆತು ಗೊಬ್ಬರವನ್ನಾಗಿ ಪರಿವರ್ತನೆಯಾಗುತ್ತದೆ. ಮರಕ್ಕೆ ಬೇಕಾದಂತಹ ಖನಿಜಾಂಶವನ್ನು ನೀಡುವುದು ಇಂತಹ ಗೊಬ್ಬರವೇ ಎಂದು ಹೇಳಿದರು.

ಹತ್ತಾರು ಬಾವಿಗಳು ಒಂದು ಕೆರೆಗೆ ಸಮ. ಹತ್ತು ಕೆರೆಗಳು ಒಂದು ಸರೋವರಕ್ಕೆ ಸಮ. ಹತ್ತು ಸರೋವರಗಳು ಒಂದು ಮಗುವಿಗೆ ಸಮ. ನಮ್ಮ ಮಕ್ಕಳನ್ನು ಹೇಗೆ ಪಾಲನೆ ಮಾಡುತ್ತೇವೋ ಹಾಗೆಯೇ, ಪರಿಸರವನ್ನು ಪಾಲನೆ ಮಾಡಬೇಕು. ಆದರೆ, ಇದನ್ನು ಯಾರು ಪಾಲಿಸದೆ ಅಲಕ್ಷೃ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಹತ್ಯೆ ಸೇರಿದಂತೆ ಇತರ ಅಪರಾಧಗಳನ್ನು ಮಾಡಿದಾಗ ಕಾನೂನಿನ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮರಗಳನ್ನು ಕಡಿದವರಿಗೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಬೇಕು ಎಂದು ಹೇಳಿದರು

ಮರದ ಬೇರಿನಿಂದ ಹಿಡಿದು ಅದರ ತುತ್ತ ತುದಿಯವರೆಗೆ ಮನುಷ್ಯ ಸೇರಿದಂತೆ ಅನೇಕ ಜೀವಿಗಳು ಬದುಕುತ್ತಿವೆ. ಹೀಗಾಗಿ, ನಮಗೆ ಪ್ರತಿಯೊಂದು ಮರವೂ ಕಲ್ಪವೃಕ್ಷವೇ. ಮರದ ಯಾವುದೇ ಭಾಗವೂ ಅನುಪಯುಕ್ತವಾಗುವುದಿಲ್ಲ ಎಂದು ಹೇಳಿದರು.

ಪರಿಸರ ಎಂದರೆ ಭೂಮಿ. ಮರ, ಗಿಡ ಹಾಗೂ ನಾವು ಪಡೆಯುತ್ತಿರುವ ಪ್ರತಿಯೊಂದು ಸಂಪತ್ತು ಸಹ ಭೂಮಿಯಿಂದ, ಮನುಷ್ಯನ ಬದುಕಲು ಅವಶ್ಯವಿರುವ ನೀರು ಸಹ ಹುಟ್ಟುವುದು ಭೂಮಿಯಿಂದ, ಹಿಂದೆ ಶುದ್ಧವಾದ ನೀರು ಅಂತರ್ಜಲದಿಂದ ದೊರೆಯುತ್ತಿತ್ತು. ನಮ್ಮ ದೇಹಕ್ಕೆ ಅವಶ್ಯವಿರುವ ಮಿನರಲ್ಸ್‌ಗಳು ನೀರಿನಲ್ಲಿ ಸಿಗುತ್ತಿದ್ದವು. ಆದರೀಗ ಶುದ್ಧ ಕುಡಿಯುವ ನೀರು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ, ಚಿಂತಕರಾದ ಪ್ರೊ.ಕಾಳೇಗೌಡ ನಾಗವಾರ, ಹೊರೆಯಾಲ ದೊರೆಸ್ವಾಮಿ, ಡಾ. ಕಾಳಚನ್ನೇಗೌಡ, ಗಂಟಯ್ಯ, ಲೀಲಾ ವೆಂಕಟೇಶ್, ವಿಶ್ವನಾಥ್, ವಸಂತ್ ಕುಮಾರ್ ಮೈಸೂರು ಮಠ, ಕಾಮಾಕ್ಷಿ ಗೌಡ, ಭಾಗ್ಯ, ಪ್ರಭಾ, ಅಂಜನಾ, ಲೀಲಾ ಶಿವಕುಮಾರ್, ಗೋಕುಲ, ಮನೋಹರ್, ಶೈಲಜೇಶ್ ಇನ್ನಿತರರಿದ್ದರು

*11

ಹೈದರ್ ಅಲಿ ರಸ್ತೆಯಲ್ಲಿ ಏರ್ಪಡಿಸಿದ್ದ ‘ಪರಿಸರದಿಂದ ನಾವು; ಪರಿಸರಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಕರಾಮುವಿ ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಡಾ.ಟಿ.ಎಸ್.ಹರ್ಷ ಮಾತನಾಡಿದರು. ಪರಶುರಾಮೇಗೌಡ, ಪ್ರೊ.ಕಾಳೇಗೌಡ ನಾಗವಾರ, ಹೊರೆಯಾಲ ದೊರೆಸ್ವಾಮಿ, ಡಾ. ಕಾಳಚನ್ನೇಗೌಡ, ಗಂಟಯ್ಯ, ಲೀಲಾ ವೆಂಕಟೇಶ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net