ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲೆ ದಬ್ಬಾಳಿಕೆ: ಪರಿಸರವಾದಿ ನಾಗೇಶ್ ಹೆಗಡೆ

18
Published on

ಮೈಸೂರು; ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ಮೇಲಿನ ದಬ್ಬಾಳಿಕೆ ಹೀಗೆಯೇ ಮುಂದುವರಿದರೆ ಮುಂದಿನ ಯುಗಮಾನದಲ್ಲಿ ಬರಿ ಕಾಂಕ್ರೀಟ್ ಪಳೆಯುಳಿಕೆ ಕಟ್ಟಡ, ಡಾಂಬರ್ ಅಷ್ಟೇ ಉಳಿಯಲಿದೆ ಎಂದು ವಿಜ್ಞಾನ ಲೇಖಕ, ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಎಚ್ಚರಿಸಿದರು.
ಮರಿಮಲ್ಲಪ್ಪನವರ ವಿದ್ಯಾಸಂಸ್ಥೆ ಮತ್ತು ಮರಿಮಲ್ಲಪ್ಪನವರ ಪ್ರೌಢಶಾಲೆಯಿಂದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಆರಂಭದಲ್ಲಿ ಬಂದ ಆದಿಮಾನವ, ಕಾಲ ಬದಲಾದಂತೆ ಸ್ವಲ್ಪ ನಾಗರಿಕತೆ ಕಲಿತ. ಬಳಿಕ ಕೃಷಿ ಮಾಡುವ ತಂತ್ರಗಳನ್ನು ಅಳವಡಿಸಿಕೊಂಡ. ಆದರೆ ದಿನ ಕಳೆದಂತೆ ಹೊಸ ಆವಿಷ್ಕಾರಗಳನ್ನು ಮಾಡಿಕೊಂಡು ಬರುತ್ತಿರುವಂತೆಯೇ ಕೈಗಾರೀಕರಣ ಹಾಗೂ ಇಡೀ ಭೂ ಮಂಡಲವನ್ನೇ ನಾಶ ಮಾಡಬಲ್ಲ ಅಣುಬಾಂಬ್ ಕಂಡುಹಿಡಿದಿದ್ದಾನೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ ತನಗೆ ಬೇಕಾದ್ದನ್ನು ಮಾತ್ರ ಉಳಿಸಿಕೊಂಡು ಉಳಿದವುಗಳನ್ನು ನಾಶ ಮಾಡುವ ಕೆಲಸ ಮಾಡುತ್ತಾನೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗ ಭೂಮಿಯಲ್ಲಿ ಇರುವ ಬೆಟ್ಟ-ಗುಡ್ಡ, ಕಣಿವೆಗಳನ್ನೆಲ್ಲ ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಾಕೃತಿಕ ವಿಕೋಪಗಳು ಆಗುತ್ತಿವೆ. 5 ಕೋಟಿ ವರ್ಷಗಳ ನಂತರ ಬೇರೆ ಜೀವಿಗಳು ಬಂದು ಈ ಭೂಮಿಯಲ್ಲಿ ಹುಡುಕಿದರೆ ಕೇವಲ ಕಾಂಕ್ರೀಟ್, ಡಾಂಬರು ಮಾತ್ರ ಸಿಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭೂಮಿ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈ ಮೂಲಕ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು. ಪ್ರಕೃತಿ, ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲಾ ಹಂತದಿಂದಲೇ ತಿಳಿಸಿಕೊಡಬೇಕು ಎಂದು ಹೇಳಿದರು.
ಶಾಲೆಯ ಹಿರಿಯ ವಿದ್ಯಾರ್ಥಿ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ಎಂ.ಎನ್.ರಘುವೀರ್ ಮಾತನಾಡಿ, ವಿದ್ಯಾರ್ಥಿಗಳು ಸತ್ಪ್ರಜೆಗಳಾಗಬೇಕು, ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆಸ್ತಿ ಗಳಿಕೆಯೇ ಆದ್ಯತೆಯಾಗಬಾರದು ಎಂದು ಹೇಳಿದರು.
ರ‌್ಯಾಂಕ್ ಗಳಿಸಿದರೆ ಮಾತ್ರ ಸಾಧನೆ ಎಂದು ಭಾವಿಸಿದರೆ ತಪ್ಪು. ನಾವು ಸಾಗುವ ದಾರಿ ಉತ್ತಮವಾಗಿರಬೇಕು ಮತ್ತು ಪರಿಶ್ರಮ ಇರಬೇಕು. ಈ ವಯಸ್ಸಿನಲ್ಲಿ ಗುರುಗಳು ಹೇಳಿದ ಮಾತುಗಳನ್ನು ಪಾಲಿಸಿ, ಶ್ರಮವಹಿಸಿ ಓದಬೇಕು ಎಂದು ಸಲಹೆ ನೀಡಿದರು.
ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ, ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಾಮಾರಾಧ್ಯ, ಮುಖ್ಯಶಿಕ್ಷಕಿ ಎಸ್.ಮಮತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net