

ಚನ್ನರಾಯಪಟ್ಟಣ: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳಾಗುತ್ತಿದೆ ಎಂದು ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನಾ.ಅಶೋಕ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಭೂಮಿ ಉಳಿಸಿ ಆಂದೋಲನ ಹಾಗೂ ಗುರಮಾರನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸೋಮವಾರ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಪರಿಸರ ಅಗತ್ಯ, ಅನಿವಾರ್ಯ. ಮಕ್ಕಳಲ್ಲಿ ಅಭಿವೃದ್ಧಿ ಹೆಸರಲ್ಲಿ ಕೀಳು ಸಂಸ್ಕೃತಿಯನ್ನು ಬಿತ್ತುತ್ತಿದ್ದೇವೆ. ಇದನ್ನು ವಿರೋಧಿಸುವ ಅಗತ್ಯ ಇದೆ. ಸುಂದರವಾದ ಪರಿಸರವನ್ನು ಉಳಿಸಲು ಚಳವಳಿ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸುಂದರವಾದ ಪ್ರಕೃತಿಯನ್ನು ಮಲಿನಗೊಳಿಸದೆ ಜೀವ ಸಂಕುಲ ಉಳಿವಿಗೆ ಮಕ್ಕಳು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಎಸಿಎಫ್ ಚಂದ್ರಶೇಖರ್, ವಲಯ ಅರಣ್ಯ ಅಧಿಕಾರಿ ರಶ್ಮಿ, ಪಲ್ಲವಿ, ವಸತಿ ಶಾಲೆಯ ಮುಖ್ಯಸ್ಥೆ ಎಚ್.ಜಿ.ಶೈಲಜಾ, ನಿಲಯ ಪಾಲಕ ಈಶ್ವರ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಎ.ಎಲ್.ನಾಗೇಶ್, ಸಂಚಾಲಕ ಎ.ಎಂ.ಜಯರಾಮ್, ಉಪಾಧ್ಯಕ್ಷರಾದ ಜಗದೀಶ್, ಮಹದೇವ್, ಸಂಘಟನಾ ಕಾರ್ಯದರ್ಶಿ ಸಚಿನ್, ಕಾರ್ಯದರ್ಶಿ ಸಿದ್ದೇಶ್, ಸೋಮಶೇಖರ್ ಇತರರು ಇದ್ದರು.