

ಬಾಗೇಪಲ್ಲಿ : ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಜಿಪಂ, ಗ್ರಾಪಂನಿಂದ ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಮೂರು ಬಾರಿ ಸರ್ಕಾರಕ್ಕೆ ಲೆಕ್ಕ ತೋರಿಸಲಾಗಿದೆಯೇ ಹೊರತು ಮನೆಗಳ ಎದುರು ನಿಲ್ಲುವ ಕೊಳಚೆ ಸಮಸ್ಯೆಗೆ ಮುಕ್ತಿ ದೊರೆತಿಲ್ಲ!.
ಇದು ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿ ಮಾರಗಾನುಕುಂಟೆಯಲ್ಲಿ ನಡೆದಿರುವ ಕಾಮಗಾರಿಯಲ್ಲಿನ ಅಕ್ರಮ ಹಾಗೂ ನಿವಾಸಿಗಳ ಅನುಭವಿಸುತ್ತಿರುವ ಯಾತನೆಗೆ ಹಿಡಿದ ಕೈಗನ್ನಡಿ.
ಗ್ರಾಮದ 2ನೇ ಬ್ಲಾಕ್‌ನಲ್ಲಿ ಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣಕ್ಕೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯಿಂದ ಮೂರು ಬಾರಿ ಹಣ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಕೆಲ ದಿನಗಳ ಹಿಂದೆಯಷ್ಟೇ ಶಾಸಕರ ಅನುದಾನದ 5 ಲಕ್ಷ ರೂ. ಗಳನ್ನು ಚರಂಡಿ ನಿರ್ಮಾಣಕ್ಕಾಗಿ ಖರ್ಚು ಮಾಡಿರುವ ನಾಮಫಲಕ ಅಳವಡಿಸಲಾಗಿದೆ. ವಿಪರ್ಯಾಸವೆಂದರೆ ಶಾಸಕರ ಅನುದಾನ ಸೇರಿ ವಿವಿಧ ಯೋಜನೆಗಳಲ್ಲಿ ಒಂದೇ ಕಾಮಗಾರಿಗೆ ಮೂರ್ನಾಲ್ಕು ಬಾರಿ ಲಕ್ಷಾಂತರ ರೂ. ಖರ್ಚು ಮಾಡಲಾಗಿದ್ದರೂ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಶೂನ್ಯವಾಗಿದೆ. ಅನುದಾನ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬಿದೆಯೇ ಹೊರತು ಸ್ಥಳೀಯರು ದುರ್ನಾತದಲ್ಲೇ ದಿನ ಕಳೆಯುತ್ತಿದ್ದೇವೆ ಎನ್ನುವುದು ಗ್ರಾಮಸ್ಥರು ಆರೋಪವಾಗಿದ್ದು 2ನೇ ಬ್ಲಾಕ್‌ನಲ್ಲಿರುವ ಅವ್ಯವಸ್ಥೆಗಳು ಇದಕ್ಕೆ ಸಾಕ್ಷಿಯಾಗಿವೆ.
ಕೊಳಚೆ ನೀರು ನಿಂತಲ್ಲೇ ನಿಂತು ಮನೆಗಳು ಕೊಳಚೆ ನೀರಿನಿಂದ ಜಲಾವೃತಗೊಂಡಿವೆ. ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದುರ್ನಾತದಿಂದಾಗಿ ಊಟ ಮಾಡುವುದಿರಲಿ, ನೆಮ್ಮದಿಯಿಂದ ಉಸಿರಾಡುವುದೂ ಕಷ್ಟವಾಗಿದೆ. ಕರೊನಾ ಕಾರ್ಮೋಡದ ಬೆನ್ನಲ್ಲೆ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿರುವ ಗ್ರಾಮಸ್ಥರು ಡೆಂಘೆ, ಚಿಕೂನ್‌ಗುನ್ಯಾಗಳಂತಹ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿ : ಮೂರ‌್ಮೂರು ಬಾರಿ ಹಣ ಬಿಡುಗಡೆ ಮಾಡಿದ್ದರೂ ಸಿಸಿ ರಸ್ತೆ ಹಾಗೂ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಸಿಸಿ ರಸ್ತೆಗಿಂತಲೂ ಎತ್ತರವಾಗಿ ಚರಂಡಿ ನಿರ್ಮಿಸಲಾಗಿದ್ದು, ಮಳೆ ನೀರು, ಕೊಳಚೆ ರಸ್ತೆಯಲ್ಲಿ ನಿಲ್ಲುವಂತಾಗಿದೆ. ಚರಂಡಿಯನ್ನು ಓಪನ್ ಬಿಡಲಾಗಿದೆ. ರಸ್ತೆ ಹಾಗೂ ಚರಂಡಿಯಲ್ಲಿ ಕಸ, ಕಡ್ಡಿ ಬಿದ್ದು ನೀರಿನಲ್ಲಿ ಕೊಳೆತು ಗಬ್ಬೆದ್ದು ನಾರುತ್ತಿದೆ.