ಅಭಿವೃದ್ಧಿ ಹರಿಕಾರ ಬಾಬೂಜಿ

CTD 0005
Published on

ಚಿತ್ರದುರ್ಗ: ಬಾಬು ಜಗಜೀವನರಾಮ್ ಅವರು ತಾವು ವಹಿಸಿಕೊಂಡಿದ್ದ ವಿವಿಧ ಖಾತೆಗಳಿಗೆ ನ್ಯಾಯ ಒದಗಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ಬಾಬು ಜಗಜೀವನರಾಮ್ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಾಬೂಜಿ ರಕ್ಷಣಾ ಮಂತ್ರಿಯಾಗಿದ್ದಾಗ ದೇಶದ ಭದ್ರತೆಗೆ ವಿಶೇಷ ಕೊಡುಗೆ ನೀಡಿದ್ದರು. ಕಾರ್ಮಿಕ ಸಚಿವರಾಗಿ ಬಡವರಿಗೆ ನ್ಯಾಯ ಒದಗಿಸಿದ್ದಾರೆ. ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮೂಲಕ ದೇಶದ ಆಹಾರ ಸಮಸ್ಯೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಶೋಷಿತ ವರ್ಗದ ವ್ಯಕ್ತಿ ಉಪ ಪ್ರಧಾನಿಯಾದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ ಅಪಾರ ಜ್ಞಾನಾರ್ಜನೆ ಹೊಂದಿದ್ದ ಬಾಬೂಜಿ ಅವರು ಪ್ರಾಮಾಣಿಕ ಮತ್ತು ಜವಾಬ್ದಾರಿಯಿಂದ ತಮಗೆ ವಹಿಸಿದ ಖಾತೆಗಳನ್ನು ನಿರ್ವಹಿಸಿದ್ದರು. ಜೈ ಜವಾನ್ ಜೈ ಕಿಸಾನ್ ಎಂದು ಘೋಷಿಸಿ ರೈತರೆಡೆ ತಮ್ಮ ಅಪಾರ ಕಾಳಜಿಯನ್ನು ಪ್ರದರ್ಶಿಸಿದ ಅಪರೂಪದ ರಾಜಕಾರಣಿ ಎಂದು ಹೇಳಿದರು.
ಗ್ಯಾರೆಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಮಾತನಾಡಿ, ಬಾಬೂಜಿ ಅವರ ತತ್ವಾದರ್ಶಗಳನ್ನು ನಾವುಗಳು ಪಾಲಿಸಬೇಕಿದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಮುಖಂಡ ಲೋಕೇಶ್‌ನಾಯ್ಕ ಮತ್ತಿತರರು ಮಾತನಾಡಿದರು.
ಎಸ್‌ಟಿ ಸೆಲ್ ಜಿಲ್ಲಾಧ್ಯಕ್ಷ ಎಚ್.ಅಂಜಿನಪ್ಪ, ಜಿ.ಎನ್.ಜಗದೀಶ್, ಕೆ.ಪಿ.ಸಂಪತ್‌ಕುಮಾರ್, ರಾಜಣ್ಣ, ಜಯಣ್ಣ, ವಕೀಲ ಮಲ್ಲೇಶ್, ಟಿ.ಸ್ವಾಮಿ, ನರಹರಿ, ನಾಗರಾಜ್, ಮಲ್ಲೇಶ್, ಶಬ್ಬಿರ್, ಕಿರಣ್, ಪ್ರಕಾಶರಾಮನಾಯ್ಕ, ವಾಸಿಂ, ಆಶೋಕ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net