

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಷ್ಟ್ರೀಯ ಮತ್ತು ಜಾಗತಿಕ ಅಭಿವೃದ್ಧಿ ಉದ್ದೇಶಗಳನ್ನು ಸಾಧಿಸಲು ಮಾನಕ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನಾಗರಿಕ ಸಮಾಜಗಳ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಭಾರತೀ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿ ಶಾಖೆಯ ನಿರ್ದೇಶಕ ಪಿ.ಎನ್. ಮುರುಳಿ ತಿಳಿಸಿದರು.
ಕಲಬುರಗಿಯಲ್ಲಿ ಬಿಐಎಸ್ ಹುಬ್ಬಳ್ಳಿ ಶಾಖೆ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿ ಗುರಿಗಳು 17-ಗುರಿಗಳಿಗಾಗಿ ಪಾಲುದಾರಿಕೆಗಳು’ ವಿಷಯದ ಕುರಿತು ಆಯೋಜಿಸಿದ್ದ ಪಾಲುದಾರರ ಸಮಾವೇಶದಲ್ಲಿ ಮಾತನಾಡಿದ ಅವರು ಗುರಿ ಸಾಧನೆಯಲ್ಲಿ ಪಾಲುದಾರರ ಪ್ರಾಮುಖ್ಯತೆಯನ್ನು ವಿವರಿಸಿದರು.
ಬಿಐಎಸ್ ಹುಬ್ಬಳ್ಳಿ ಶಾಖೆ ಜಂಟಿ ನಿರ್ದೇಶಕ ತುಷಾರ ಶರ್ಮಾ ಮಾತನಾಡಿ, ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್ಒ), ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗ (ಐಇಸಿ) ಮತ್ತು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಯು) ಇವು ಉತ್ತಮ ಪ್ರಪಂಚಕ್ಕಾಗಿ ಸುಸ್ಥಿರ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿವೆ ಎಂದರು.
ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿ, ಸಾರ್ವಜನಿಕ ಜೀವನವನ್ನು ಸುಧಾರಿಸುವಲ್ಲಿ, ವಿಶ್ವಾಸವನ್ನು ಬೆಳೆಸುವಲ್ಲಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವಲ್ಲಿ ಗುಣಮಟ್ಟದ ಮಾನದಂಡಗಳು ಪರಿಣಾಮಕಾರಿ ಪಾತ್ರವನ್ನು ನಿಭಾಯಿಸುತ್ತವೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ಅಶುತೋಷ್ ಅಗರ್ವಾಲ್ ಪ್ರಾಸ್ತಾವಿಕ ಮಾತನಾಡಿದರು. ಎಸಿಸಿ ಲಿಮಿಟೆಡ್ನ ಮುಖ್ಯ ಸ್ಥಾವರ ವ್ಯವಸ್ಥಾಪಕ ಅಜಯ ಶರ್ವ, ಬೆಂಗಳೂರಿನ ರಾಷ್ಟ್ರೀಯ ಉತ್ಪಾದಕತಾ ಮಂಡಳಿಯ ಮುಖ್ಯಸ್ಥ ಸ್ವರೂಪನ್ ದಾಸ್, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮಾತನಾಡಿದರು. ಚಂದ್ರಶೇಖರ ಕೋಬಲ್, ಭೀಮಾಶಂಕರ ಪಾಟೀಲ, ರವೀಂದ್ರ ಮುಕ್ಕಾ, ಮೊಹಮ್ಮದ್ ಮಹಮೂದ್ ಖಾನ್, ರೂಪಾಲಿ ಶೇರ್ಖಾನೆ, ಜಾಫರ್ ಖಾಸಿಂ ಅನ್ಸಾರಿ ಮತ್ತು ಇತರರು ಉಪಸ್ಥಿತರಿದ್ದರು.