ಅಭಿವೃದ್ಧಿ ಸಾಧಿಸಲು ಅಕ್ಷರ ಆವಿಷ್ಕಾರ ಸಹಕಾರ

01 YERRISWAMY 06
Published on

ಬಳ್ಳಾರಿ : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಅಕ್ಷರ ಆವಿಷ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶೈಕ್ಷಣಿಕವಾಗಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಸಂಡೂರು ತಾಲೂಕಿನ ಜಿಂದಾಲ್ ವಿದ್ಯಾನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ, ಜೆಎಸ್‌ಡಬ್ಲೂ ಫೌಂಡೇಶನ್ ಸಹಯೋಗದೊಂದಿಗೆ ಎಜುಕಾನ್-2024 ಎರಡು ದಿನಗಳ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ಮೂಲಭೂತ ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿಯ ವಾರ್ಷಿಕ ನಿಧಿಯಲ್ಲಿ ಶೇ. 25 ರಷ್ಟು ಹಣಕಾಸು ವಿನಿಯೋಗಿಸಲು ನಿಗದಿಪಡಿಸಲಾಗಿದೆ ಎಂದರು.
ವಿಜಯನಗರ ಡಿಸಿ ಎಂ. ದಿವಾಕರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಕುಡುಕರ ಅಡ್ಡೆಗಳಾಗಿ ಮಾರ್ಪಾಟ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಶಿಕ್ಷಕರಿಗೆ ಕೇವಲ ನೈತಿಕತೆ ತುಂಬಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕಾತಿ ಜತೆಯಲ್ಲಿ ಅಡಿಷನಲ್ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಬೇಕು. ಪ್ರತಿ ಹಳ್ಳಿಗಳಲ್ಲಿ ಬಿಎಡ್ ಹಾಗೂ ಪದವಿ ಪಡೆದ ಅನೇಕ ಯುವಕರಿದ್ದಾರೆ. ಆರೋಗ್ಯ ಆವಿಷ್ಕಾರದಲ್ಲಿ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಡಿಯೊ ವೈದ್ಯರನ್ನು ನೇಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಎನ್. ಆಕಾಶ್‌ಮಾತನಾಡಿ, ಗುಣಾತ್ಮಕ ಶಿಕ್ಷಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಏಳು ಜಿಲ್ಲೆಯ 42 ವಿವಿಧ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಸಾಧನೆಗಳ ಕುರಿತು ಶಿಬಿರಾರ್ಥಿಗಳೊಡನೆ ಚರ್ಚಿಸಿ, ಮುಂದಿನ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net