

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು 30 ವರ್ಷಗಳಿಂದ ಹಿಂದುಳಿದಿದ್ದು, ಶಾಸಕನಾಗಿ ಆಯ್ಕೆಗೊಂಡ ಸಂದರ್ಭದಿಂದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.
ಸಮೀಪದ ಕೋಮಲಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳನ್ನು ಸಹಿಸದ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಪ್ರಾದೇಶಿಕ ಪಕ್ಷ ಅಧಿಕಾರವಿರುವ ರಾಜ್ಯಗಳು ಅಭಿವೃದ್ಧಿ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರ ಹಿಡಿದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ. ಪಕ್ಷದ ಕಾರ್ಯಕರ್ತರು ತಮ್ಮೊಳಗಿನ ಅಸಮಾಧಾನಗಳನ್ನು ಬಿಟ್ಟು ಪಕ್ಷ ಸಂಘಟಿಸುವತ್ತ ಗಮನಹರಿಸಬೇಕು. ಇದು ರೈತರು, ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಇರುವ ಪಕ್ಷ ಎಂದರು.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ರಾಜ್ಯದಲ್ಲಿ ಪಂಚರತ್ನ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು ಜನವರಿ ಅಥವಾ ಫೆಬ್ರವರಿಯಲ್ಲಿ ತಾಲೂಕಿಗೆ ಆಗಮಿಸಲಿದೆ. ಅಲ್ಲದೇ, ಜ.4ಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಾಲೂಕಿಗೆ ಆಗಮಿಸುತ್ತಿದ್ದಾರೆ. ಅಂಬಲಾರೆ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಯಲಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಹಿರಿಯ ವಕೀಲ ಕಾನೂರು ಗೋವಿಂದೇಗೌಡ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಪಾಪೇಗೌಡ, ಸದಸ್ಯರಾದ ಅಶೋಕ್, ಪದ್ಮಮ್ಮ, ಶಿವಮ್ಮ, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್, ಮುಖಂಡರಾದ ಗಗನ್, ರಘುನಾಥ್, ವಿದ್ಯಾಶಂಕರ್, ಪ್ರೇಮ್ ಕುಮಾರ್, ತಿಮ್ಮನಾಯಕ, ಈರೇಗೌಡ, ಕುಮಾರ್, ಸ್ವಾಮಿಗೌಡ, ನಿಂಗೇಗೌಡ ಇದ್ದರು.