ಅಭಿವೃದ್ಧಿ ವಿಷನ್ ಅಭೂತಪೂರ್ವ ಬೆಂಬಲ

nagmarpalli prachar
Published on

ಬೀದರ್: ಬೀದರ್ ಉತ್ತರ ಕ್ಷೇತ್ರದಲ್ಲಿ ಜೆಡಿ ಎಸ್ ಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲ ಸಮಾಜದವರ ಸಾಥ್ ದೊರಕುತ್ತಿದ್ದು, ಭರ್ಜರಿ ಜಯ ಖಚಿತ ಎಂದು ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಾಯಿ ಕಾಲನಿ, ಅಂಬೇಡ್ಕರ್ ಕಾಲನಿ, ಹಾರೂರಗೇರಿ, ಬಸವನಗರ, ವಿದ್ಯಾನಗರಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬೀದರ್ ಕ್ಷೇತ್ರದ ಸಮಗ್ರ ವಿಕಾಸವೇ ನನ್ನ ಧ್ಯೇಯ. ಇದಕ್ಕಾಗಿ ಸತತ ಕೆಲಸ ಮಾಡುತ್ತಿರುವೆ. ಅಧಿಕಾರದಲ್ಲಿ ಇರದಿದ್ದರೂ ಜನರ ಸೇವೆ ಮಾಡಿದ್ದೇನೆ. ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಒಮ್ಮೆ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಜೆಡಿಎಸ್ ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಜಾತಿಗಳ ಭೇದ ಇಲ್ಲದೆ ಎಲ್ಲ ಸಮುದಾಯಗಳ ಏಳಿಗೆಗೆ ನೆರವಾಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಂಕಲ್ಪ ತೊಟ್ಟಿದೆ. ಕೃಷಿ ಕ್ಷೇತ್ರ ಬಲಪಡಿಸಲು, ರೈತರನ್ನು ಆರ್ಥಿಕ ಸದೃಢಗೊಳಿಸಲು ಜೆಡಿಎಸ್ ವಿಶೇಷ ಯೋಜನೆ ಹಾಕಿಕೊಂಡಿದೆ. ಮತದಾರರು ಪಕ್ಷಕ್ಕೆ ಬೆಂಬಲಿಸಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಹಾರೂರಗೇರಿ, ಹಾವಶೆಟ್ಟಿ ಪಾಟೀಲ್, ಮಾರುತಿ ಬೌದ್ಧೆ, ಅರುಣ ಹೋತಪೇಟ, ರಾಜಶೇಖರ ಜವಳೆ, ನಂದು ಪಾಟೀಲ್, ವಿಷ್ಣುವರ್ಧನ ವಾಲ್ದೊಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net