ಅಭಿವೃದ್ಧಿ ವಿಚಾರದಲ್ಲಿಲ್ಲ ಪಕ್ಷಪಾತ

11
Published on

ಕೇಂದ್ರ ಸಚಿವ ಸೋಮಣ್ಣ ಹೇಳಿಕೆ, ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ

ತಿಪಟೂರು: ಒಂದು ಸಿಂಧೂರ ಅಳಿಸಿದರೆ ಎಷ್ಟು ಸಿಂಧೂರ ಅಳಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ತೋರಿಸಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ತಾಲೂಕಿನ ಬಿದರೇಗುಡಿ ಸಮೀಪ ರೈಲ್ವೆ ಲೆವೆಲ್​ ಕ್ರಾಸಿಂಗ್​ ಸಂಖ್ಯೆ&88ರ ಬದಲಿಗೆ ಅಂದಾಜು 30 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ನಾನು ಪಕ್ಷ ನೋಡಿಲ್ಲ. ಪ್ರಧಾನಿ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವರ ಆಶಯದಂತೆ ಯೋಜನಾ ವೆಚ್ಚ ಲೆಕ್ಕಿಸದೇ ರೈಲ್ವೇ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗುತ್ತಿದೆ. ನನ್ನ ೇತ್ರದಲ್ಲಿ ಅಂದಾಜು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ 23 ಆರ್​ಓಬಿ ಮತ್ತು ಆರ್​ಯುಬಿ ಸೇತುವೆಗಳು ನಿರ್ಮಾಣವಾಗುತ್ತಿದ್ದು, ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ಬರಿಸುತ್ತಿದೆ. ಇರದಲ್ಲಿ ರಾಜ್ಯದ ಪಾಲು ನಯಾಪೈಸೆಯೂ ಇಲ್ಲ. ಇದೇ ರೀತಿಯಲ್ಲಿ ಮುಂದಿನ ಒಂದು ವರ್ಷದಲ್ಲಿ ರಾಜ್ಯಾದ್ಯಂತ 250&300 ಆರ್​ಒಬಿ/ ಆರ್​ಯುಬಿ ನಿರ್ಮಾಣವಾಗಲಿದ್ದು, ಇಡೀ ರಾಜ್ಯವನ್ನು ರೈಲ್ವೆ ಲೆವೆಲ್​ ಕ್ರಾಸಿಂಗ್​ ಮುಕ್ತ ಮಾಡಲಾಗುವುದು ಎಂದರು.

ನಾನು ಈ ಭಾಗದ ಪುಣ್ಯ ೇತ್ರಗಳಾದ ಹೊಸಪಟ್ಟಣದಮ್ಮ ಮತ್ತು ಹೊನ್ನವಳ್ಳಿ ಹೊನ್ನಾಂಬಿಕಾ ದೇವರ ಸನ್ನಿಧಿಗೆ ಹೋಗುವಾಗ ಇಲ್ಲಿನ ರೈಲ್ವೆ ಗೇಟ್​ ಹಾಕಿದ್ದನ್ನು ಗಮನಿಸಿ ರೈಲ್ವೆ ಮೇಲ್ಸೇತುವೆ ಅಗತ್ಯತೆ ಗುರುತಿಸಿದ್ದೆ. ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ

ಇಂದು ಕೇಂದ್ರದಲ್ಲಿ ರೈಲ್ವೆ ಖಾತೆ ಸಚಿವನಾಗಿದ್ದೇನೆ. ನಿಮ್ಮೆಲ್ಲರ ಋಣ ಮತ್ತು ದೇವಿಯ ಹರಕೆ ತೀರಿಸುವ ಸಲುವಾಗಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಪುಣ್ಯ ನನ್ನದಾಗಿದೆ. 50 ವರ್ಷಗಳ ಹಿಂದೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಬಹುದಾಗಿದ್ದ ಇಲ್ಲಿನ ಮೇಲ್ಸೇತುವೆ ವೆಚ್ಚ ಇಂದು 30 ಕೋಟಿ ರೂ. ತಲುಪಿದೆ ಎಂದರು.

ತಾಲೂಕಿನಲ್ಲಿ ಬಾಕಿ ಇರುವ 2.8 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂ ಪರಿಹಾರವೇ 100 ಕೋಟಿಗೂ ಹೆಚ್ಚು ದಾಟಿದೆ. ಅಲ್ಲಿನ ನಿವಾಸಿಗಳು ಮನೆ, ಭೂಮಿ ಕಳೆದುಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕೇವಲ 35 ಕೋಟಿ ರೂಪಾಯಿ ವೆಚ್ಚದಲ್ಲಿ ಬದಲೀ ಕಾಮಗಾರಿ ಮುಗಿದಿದೆ ಎಂದ ಸೋಮಣ್ಣ, ಕೆ.ಬಿ.ಕ್ರಾಸ್​ ವೃತ್ತವನ್ನು ನವೀಕರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಇಒ ಅನೂಪ್​ ಅವರಿಗೆ ಸೂಚಿಸಿದರು.

ಸಮಾರಂಭದಲ್ಲಿ ಮುಖಂಡರಾದ ಗುರುಮೂರ್ತಿ, ಬಿಸಲೇಹಳ್ಳಿ ಜಗದೀಶ್​, ಗೊರಗೊಂಡನಹಳ್ಳಿ ಸುದರ್ಶನ್​, ರೈಲ್ವೆ ಇಲಾಖೆ ವ್ಯವಸ್ಥಾಪಕ ಪ್ರಸಾದ್​, ಕಾಮಗಾರಿ ವಿಭಾಗದ ಮುಖ್ಯಸ್ಥ ವಿಜಯ್​ಕುಮಾರ್​, ರಾಷ್ಟ್ರೀಯ ಹೆದ್ದಾರಿ ಸಿಇಒ ಅನೂಪ್​ ಇತರರು ಇದ್ದರು.

ರಾಜಕೀಯ ಸಲ್ಲ: ಸ್ವಾತಂತ್ರ$್ಯ ಬಂದು 75 ವರ್ಷಗಳಾದರೂ ಜಿಲ್ಲೆಯ ಮಧುಗಿರಿ ಭಾಗದ ಜನ ಇನ್ನೂ ಪ್ಲೋರೈಡ್​ಯುಕ್ತ ನೀರು ಸೇವಿಸುತ್ತಿರುವುದು ವಿಷಾಧನೀಯ. ಪ್ರಧಾನಿ ಮೋದಿ 4 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಇಡೀ ದೇಶವಾಸಿಗಳಿಗೆ ಶುದ್ಧ ಜೀವ ಜಲ ಒದಗಿಸುವ ಜೆಜೆಎಂ ಮಿಷನ್​ ಹಮ್ಮಿಕೊಂಡಿದ್ದಾರೆ. ಆದರೆ ಜೆಜೆಎಂ ಕಾಮಗಾರಿ ಪ್ರಗತಿ ವಿಚಾರದಲ್ಲಿ ರಾಜ್ಯ 20ನೇ ಸ್ಥಾನದಲ್ಲಿದೆ. ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಸೋಮಣ್ಣ ತಿಳಿಸಿದರು.

ನಾಳೆ ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ಕೆನಾಲ್​ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಯಾರೋ ಮಾಡಿದ ಎಡವಟ್ಟಿಗೆ ನಾವು ಬಲಿಯಾಗುವುದು ಬೇಡ. ಅಧಿಕಾರ ಸಿಕ್ಕಾಗ ಕೆಲವರು ಇತರರಿಗೆ ಅನಾನುಕೂಲ ಮಾಡುವುದು ತರವಲ್ಲ. ನನ್ನ ಇಲಾಖೆಗೆ ಸೇರಿದ ಕೆಲಸ ನಿರ್ವಹಿಸಲು ನಾನು ಬದ್ಧ. ನನಗೆ ಸಂಸದರ ನಿಧಿ ಸಿಗುವುದು 5 ಕೋಟಿ ರೂ. ಮಾತ್ರ. ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಭವನ ನಿರ್ಮಾಣಕ್ಕೆ ನನ್ನನ್ನು ಒತ್ತಾಯಿಸಬೇಡಿ. ಇದರ ಜತೆಗೆ ಮಠ, ಮಾನ್ಯಗಳಿಗೂ ನಾನು ಮಾನ್ಯತೆ ನೀಡಬೇಕಿದೆ.| ವಿ.ಸೋಮಣ್ಣ ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net