

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬಿಜೆಪಿ ಸರ್ಕಾರದ ಜನರಪರ ಯೋಜನೆ, ಕಾಯಿದೆಗಳನ್ನು ಬಿಟ್ಟಿರುವುದು ಸರಿಯಲ್ಲ ಎಂದು ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ರಾಜಕೀಯ ಮಾಡಬೇಕೆ ಹೊರತು, ರಾಜ್ಯದ ಹಿತದಲ್ಲಿ ಅಲ್ಲ. ರಾಜ್ಯ ಹಾಗೂ ಜನರ ಹಿತಕ್ಕೆ ಜಾರಿ ಮಾಡಿದ ಜನಪರ ಯೋಜನೆ ಹಾಗೂ ಕಾಯಿದೆಗಳನ್ನು ರದ್ದು ಮಾಡುವ ಮೂಲಕ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ಇದು ರಾಜ್ಯದ ಹಿತದೃಷ್ಠಿಯಿಂದ ಒಳ್ಳೆಯದಲ್ಲ ಎಂದರು.
ರೈತರಿಗೆ ಅನುಕೂಲವಾಗಿದ್ದ ಎಪಿಎಂಸಿ ಕಾನೂನು, ರೈತರ ಕುಟುಂಬದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆ, ಭೂಸಿರಿ ಯೋಜನೆ, ರೈತ ಶಕ್ತಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯಿದೆ ಕೈಬಿಡಲಾಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರ ಸಹ ರಾಜ್ಯದ 51 ಲಕ್ಷ ರೈತರಿಗೆ (ವಾರ್ಷಿಕ 2 ಕಂತುಗಳಲ್ಲಿ 4 ಸಾವಿರ ರೂ.) ಕಿಸಾನ್ ಸಮ್ಮಾನ ನಿಧಿ ಯೋಜನೆ ತಡೆಹಿಡಿಯಲಾಗಿದೆ ಎಂದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ರೂ.ಅನುದಾನ ಒದಗಿಸಿತ್ತು. ಈಗ ಅದನ್ನು 19 ಸಾವಿರ ಕೋಟಿಗೆ ರೂ.ಗೆ ಇಳಿಸಿದೆ. ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಮಾಡಿದ ಪಾದಯಾತ್ರೆ ರಾಜಕೀಯ ತಂತ್ರವಷ್ಟೇ. ಜನಪರ ಯೋಜನೆಗೆ ಕೊಕ್ಕೆ, ಕಾಯಿದೆ ರದ್ದುಗೊಳಿಸುವ ಕಾಂಗ್ರೆಸ್ ನಡೆ ಖಂಡನೀಯ. ಇದು ಹೀಗೆ ಮುಂದುವರೆದರೆ ರೈತ ಮೋರ್ಚಾದಿಂದ ರೈತರೊಂದಿಗೆ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಪ್ರಧಾನ ಕಾರ್ಯದರ್ಶಿ ಬಸವಣ್ಣೆಪ್ಪ ಬಾಳಗಿ, ಮಂಜುನಾಥ ನೀರಲಕಟ್ಟಿ, ಮೋಹನ ರಾಮದುರ್ಗ, ಇತರರು ಇದ್ದರು.