ಅಭಿವೃದ್ಧಿ ಮೂಲಕ ಋಣ ತೀರಿಸುವೆ

MLA BAla
Published on

ಚನ್ನರಾಯಪಟ್ಟಣ: ತಮ್ಮ ಊರಿನ ಮಗನಂತೆ ಆಶೀರ್ವದಿಸಿ ಮೂರನೇ ಬಾರಿ ಗೆಲುವು ಸಾಧಿಸಲು ಸಹಕರಿಸಿದ ಶೆಟ್ಟಿಹಳ್ಳಿಯ ಜನತೆಗೆ ಧನ್ಯವಾದ ಹೇಳುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕ್ಷೇತ್ರಕ್ಕೆ ಒತ್ತು ನೀಡಿದ್ದರಿಂದ ತಾಲೂಕಿನ ಜನತೆ ಮರು ಆಯ್ಕೆ ಮಾಡಿದ್ದೀರಿ. ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಆದ್ಯತೆ ನೀಡಲಾಗಿದೆ. ತಾಲೂಕಿನ ಎಲ್ಲ ಹೋಬಳಿಗಳಲ್ಲೂ ಹೆಚ್ಚು ಮತ ನೀಡಲಾಗಿದೆ. ಶ್ರವಣಬೆಳಗೊಳ ಹೋಬಳಿಯಲ್ಲಿ 4,600 ಹೆಚ್ಚುವರಿ ಮತಗಳು ಬಂದಿದ್ದರೆ, ಹಿರೀಸಾವೆ ಹೋಬಳಿಯಲ್ಲಿ 2,800 ಮತಗಳು ಬಂದಿವೆ. ಬಾಗೂರು ಹೋಬಳಿಯಲ್ಲಿ 1600 ಮತಗಳು ಬಂದಿದ್ದರೆ, ನುಗ್ಗೆಹಳ್ಳಿ ಹೋಬಳಿಯಲ್ಲಿ ಸ್ವಲ್ಪ ಹೆಚ್ಚುವರಿ ಮತಗಳು ಬಂದಿವೆ. ಕಸಬಾ ಹೋಬಳಿಯಲ್ಲಿ ಕೆಲವು ಕಡೆ ಕಡಿಮೆ ಮತಗಳು ಬಂದಿದ್ದರೂ ಕೆಲವು ಗ್ರಾಮಗಳು ನನಗೆ ಹೆಚ್ಚುವರಿ ಮತಗಳನ್ನು ನೀಡಿವೆ. ಶೆಟ್ಟಿಹಳ್ಳಿ ಗ್ರಾಮಸ್ಥರು ಪ್ರೀತಿಯಿಂದ ಕಂಡಿದ್ದೀರಿ, ಅಭಿವೃದ್ಧಿ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದರು. ದಯಾನಂದ್, ರಮೇಶ್ ಕುಂಬಾರಹಳ್ಳಿ, ಹಡೇನಹಳ್ಳಿ ಲೋಕೇಶ್, ಅನಿಲ್ ಮರಗೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net