

ಎಚ್.ಡಿ. ಕೋಟೆ: ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲು ನನಗೆ ಸಹಕಾರ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಕೋರಿದರು.
ಪಟ್ಟಣದ ಬಿಜಿಎಸ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಭೆಯಲ್ಲಿ ಮಾತನಾಡಿದರು.
ಕಳೆದ ಐದು ವರ್ಷಗಳಿಂದ ನನಗೆ ಈ ಸಮುದಾಯದ ಬೆಂಬಲ ಸಾಕಷ್ಟಿದೆ. ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಕೋರಿದರು.
ಕ್ಷೇತ್ರದ ಅಭಿವೃದ್ಧಿಯೊಂದಿಗೆ ನನ್ನ ರಾಜಕೀಯ ಗುರುಗಳಾದ ಧ್ರುವ ನಾರಾಯಣರ ಹೆಸರನ್ನು ಉಳಿಸಲು ಹೋರಾಟ ಮಾಡುತ್ತೇನೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಲಗೈ ಸಮುದಾಯ ನನಗೆ ಬೆನ್ನೆಲುಬಾಗಿ ನಿಂತು ಮತ ನೀಡಬೇಕು ಎಂದು ಅನಿಲ್ ಚಿಕ್ಕಮಾದು ಮನವಿ ಮಾಡಿದರು.
ತಾಲೂಕಿನಲ್ಲಿ ಬಲಗೈ ಸಮುದಾಯದವರು ಯಾರನ್ನು ಬೆಂಬಲಿಸುತ್ತಾರೋ ಆ ವ್ಯಕ್ತಿ ಜಯ ಗಳಿಸುತ್ತಾರೆ. ಅದು 2013 ಮತ್ತು 2018 ರ ಚುನಾವಣೆಯಲ್ಲಿ ಸಾಬೀತಾಗಿದೆ. ನಾನು ಶಾಸಕನಾದ 5 ವರ್ಷಗಳ ಅವಧಿಯಲ್ಲಿ ಈ ಸಮಾಜಕ್ಕೆ ಕಪ್ಪು ಚುಕ್ಕಿ ತಾರದಂತೆ ಕೆಲಸ ನಿರ್ವಹಿಸಿದ್ದೇನೆ. ಮುಂದೆಯೂ ಹಾಗೆಯೇ ಇರುತ್ತೇನೆ ಎಂದು ಭರವಸೆ ನೀಡಿದರು. ಆದಿ ಕರ್ನಾಟಕ ಸಮುದಾಯದ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸ್ವಾತಂತ್ರೃ ಪೂರ್ವದಿಂದಲೂ ಈ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಹಾಗಾಗಿ ನಮ್ಮ ಸಮುದಾಯ ಕಾಂಗ್ರೆಸ್ ಪಕ್ಷದ ಪರವಾಗಿ ಇರುತ್ತದೆ. ಶಾಸಕ ಅನಿಲ್ ಚಿಕ್ಕಮಾದು ಗೆಲುವಿಗೆ ಶ್ರಮಿಸಲಿದೆ ಎಂದರು. ಮುಖಂಡರಾದ ಕಂದೇಗಾಲ ಶಿವರಾಜು, ಬೀರ್ವಾಳ ಬಸವರಾಜು, ಜಕ್ಕಹಳ್ಳಿ ಮಲ್ಲೇಶ, ವನಸಿರಿ ಶಂಕರ, ಮರಿದೇವಯ್ಯ, ನಟರಾಜು, ಪುಟ್ಟಸ್ವಾಮಿ, ಜಿಯಾರ ಬೆಟ್ಟಯ್ಯ, ಚಿಕ್ಕವೀರನಾಯಕ, ವನಸಿರಿ ಉಮೇಶ, ಮಂಜು ಮುಳ್ಳೂರು, ಪ್ರೇಮ್ ಸಾಗರ, ಮುದ್ದಮಲ್ಲಯ್ಯ, ಶಶಿ ಹುಣಸಹಳ್ಳಿ, ಸಿರಾಜ್, ನಾಗರಾಜು ಉಯ್ಯಂಬಳ್ಳಿ, ತ್ರಿಶಂಬು ಇತರರು ಇದ್ದರು.