

ಹೊಳೆನರಸೀಪುರ: ದೇವೇಗೌಡರು ತಮ್ಮ ಅಧಿಕಾರದ ಕಾಲದಲ್ಲೇ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ಸಮಾಜಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದರು.
ಪಟ್ಟಣದ ಚೆನ್ನಾಂಬಿಕ ಕನ್ವೆನ್ಷನ್ ಹಾಲ್‌ನಲ್ಲಿ ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಹಳ್ಳಿಮೈಸೂರು ಹೋಬಳಿ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಎಚ್‌ಆರ್‌ಬಿಸಿ ನಾಲೆ ಹಾಗೂ ಜಿಲ್ಲೆಯ ಅನೇಕ ಭಾಗಗಳಿಗೆ ನೀರಾವರಿ ಯೋಜನೆಗಳನ್ನು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದರು.
ರಸ್ತೆ, ಪ್ಲೈ ಓವರ್, ರೈಲ್ವೆ ಯೋಜನೆಗಳ ವಿಸ್ತರಣೆ, ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಭಾಗದಲ್ಲಿ ಹೆಚ್ಚು ರೈಲುಗಳು ಸಂಚಾರ ಮಾಡಲು ಅನುಮೋದನೆ ದೊರೆತಿದೆ. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು, ಮುಸ್ಲಿಮರಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಕಳೆದ 4 ತಿಂಗಳಿಂದ ಸುಮಾರು 120 ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅವರ ಗುರಿ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿದ್ದು, ಅದಕ್ಕೆ ನಾವೆಲ್ಲರೂ ಬದ್ಧರಾಗಿ ಪಕ್ಷ ಗೆಲ್ಲಿಸಲು ಪ್ರಯತ್ನಿಸೋಣ ಎಂದರು.
ಬೇರೆ ಪಕ್ಷದ ನಾಯಕರು ನಿಮ್ಮನ್ನು ಯಾರಾದರೂ ಭೇಟಿ ಮಾಡಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಅವರ-ನಮ್ಮ ಬಾಂಧವ್ಯ ಬೇರೆ, ಸಿದ್ದರಾಮಯ್ಯ ಅವರು ಕರೆದರೆ ನಾನ್ಯಾಕೆ ಹೋಗಲಿ, ಕುಮಾರಸ್ವಾಮಿ ದೇವೇಗೌಡರು ನಮ್ಮ ನಾಯಕರು. ಅವರು ಇರುವಾಗ ನಾನ್ಯಾಕೆ ಹೋಗಲಿ ಎಂದರು.
ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ರೇವಣ್ಣ ಮಾತನಾಡಿ, ಎಚ್.ಡಿ. ರೇವಣ್ಣ ಅವರು ಶಾಸಕರಾಗಿ ಏನು ಮಾಡಬೇಕು ಅದನ್ನು ಮಾಡಿದ್ದಾರೆ. ತಾಲೂಕು ಆಸ್ಪತ್ರೆಯು ಇಡೀ ಜಿಲ್ಲೆಯಲ್ಲಿ ಒಂದು ಮಾದರಿ ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು, 300 ಹಾಸಿಗೆಯುಳ್ಳ ಹೈಟೆಕ್ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಹ ನಿರ್ಮಾಣ ಮಾಡಲಾಗಿದೆ ಎಂದರು.
ಇಡೀ ರಾಜ್ಯದಲ್ಲಿಯೇ ತಾಲೂಕು ಕೇಂದ್ರದಲ್ಲಿ ಏಳು ಪ್ರಥಮ ದರ್ಜೆ ಕಾಲೇಜುಗಳನ್ನು ತೆರೆದಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಲ್ಲ ಮಾರ್ಗಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ನಮ್ಮ ಅಭಿವೃದ್ಧಿ ಕೆಲಸ ನೋಡಿ ಕಾರ್ಯಕರ್ತರು ನಮ್ಮ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜು, ತಾಲೂಕು ಘಟಕದ ಜೆಡಿಎಸ್ ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಪುರಸಭೆ ಅಧ್ಯಕ್ಷೆ ಜ್ಯೋತಿ ಮಂಜುನಾಥ, ಉಪಾಧ್ಯಕ್ಷೆ ತ್ರಿಲೋಚನಾ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ದ್ಯಾವೇಗೌಡ ಇತರರಿದ್ದರು.