ಅಭಿವೃದ್ಧಿ ಜಿಲ್ಲೆಯಲ್ಲಿ ಬೀದರ್ ಗೆ ಸ್ಥಾನ

sanman
Published on

ಬೀದರ್: ಆರೋಗ್ಯ, ಶಿಕ್ಷಣ, ಕೃಷಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಿ ರಾಜ್ಯದ ಮುಂದುವರಿದ ಐದು ಜಿಲ್ಲೆಗಳ ಸಾಲಿನಲ್ಲಿ ಬೀದರ್ ಸ್ಥಾನ ಪಡೆಯುವಂತೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಾಗರಿಕ ಅಭಿನಂದನಾ ಸಮಿತಿಯಿಂದ ಝಿರಾ ಕನ್ವೆನ್ಶನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳನ್ನು ಬಲಪಡಿಸುವ ಮೂಲಕ ಜಿಲ್ಲೆಯ ಚಿತ್ರಣ ಬದಲಾಯಿಸಲಾಗುವುದು ಎಂದರು.
ಜಿಲ್ಲೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯದಲ್ಲಿ ಉತ್ತಮ ಸ್ಥಾನದಲ್ಲಿದೆ. ಆದರೆ ರಾಜ್ಯದ ಮುಂದುವರಿದ ಜಿಲ್ಲೆಗಳ ಸಾಲಿಗೆ ಸೇರಿಸುವ ಕೆಲಸ ಆಗಬೇಕಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ವ್ಯವಸ್ಥೆ ಸರಿಪಡಿಸಿ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಅಭಿವೃದ್ಧಿ ವೇಗ ಹೆಚ್ಚಿಸುವಲ್ಲಿ ಈ ಎರಡು ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹಿಂದಿನ ಸಕರ್ರಾರ ಬೀದರ್ ವಿಶ್ವವಿದ್ಯಾಲಯ ಘೋಷಿಸಿ ಕೇವಲ ಎರಡು ಕೋಟಿ ರೂ. ನೀಡಿದೆ. ಈ ಅಲ್ಪ ಮೊತ್ತದಲ್ಲಿ ಹೊಸ ವಿವಿ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನೂತನ ವಿವಿಗೆ ಕನಿಷ್ಠ 500 ಕೋಟಿ ರೂ. ಬೇಕು. ವರ್ಷಕ್ಕೆ 50 ಕೋಟಿ ಅನುದಾನ ನೀಡಬೇಕಾಗಿದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆ ಹೆಚ್ಚಿವೆ. ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಆಗಬೇಕಾಗಿದೆ. ನಗರದಲ್ಲಿರುವ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ಸುಧಾರಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಕ್ಯಾಥ್ಲಾಬ್ ಸೇರಿ ವಿವಿಧ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ನಮ್ಮ ಸರ್ಕಾರದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿ ಜಿಲ್ಲೆಯನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಗೆ ಸೇರಿಸುವುದಾಗಿ ಹೇಳಿದರು.
ಪೌರಾಡಳಿತ ಸಚಿವ ರಹೀಮ್ ಖಾನ್ ಮಾತನಾಡಿದರು. ಅಭಿನಂದನಾ ಭಾಷಣವನ್ನು ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ. ಮೂಲಿಮನಿ ಮಾಡಿದರು. ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ, ಶ್ರೀ ಶಿವಾನಂದ ದೇವರು ಸಾನ್ನಿಧ್ಯ, ನಾಗರಿಕ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ.ಪುಂಡಲೀಕರಾವ್, ಪ್ರಮುಖರಾದ ಡಾ.ಎಸ್. ಬಲಬೀರಸಿಂಗ್, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶೆಟಕಾರ್, ಡಾ.ರಜನೀಶ್ ವಾಲಿ, ಡಾ.ಗುರಮ್ಮ ಸಿದ್ದಾರಡ್ಡಿ, ವೈಜನಾಥ ಕಮಠಾಣೆ, ಅಮೃತರಾವ ಚಿಮಕೋಡೆ, ಡಾ.ಪೂರ್ಣಾಮಾ ಜಿ., ಗೀತಾ ಚಿದ್ರಿ, ಶಂಕರರಾವ್ ಹೊನ್ನಾ, ಆನಂದ ದೇವಪ್ಪ, ಶಿವಯ್ಯ ಸ್ವಾಮಿ, ಅಶೋಕಕುಮಾರ ಹೆಬ್ಬಾಳೆ, ಶಾಂತಲಿಂಗ ಸಾವಳಗಿ, ಮಲ್ಲಿಕಾರ್ಜುನ ಸ್ವಾಮಿ, ಎಸ್.ಬಿ. ಕುಚಬಾಳ, ಶಂಭುಲಿಂಗ ಕಾಮಣ್ಣ, ಶಿವಾನಂದ ಗುಂದಗಿ, ನಿಜಲಿಂಗಪ್ಪ ತಗಾರೆ, ಮಲ್ಲಮ್ಮ ಸಂತಾಜಿ, ಡಾ.ಸುನೀತಾ ಕೂಡ್ಲಿಕರ್, ಮಹಾನಂದಾ ಮಡಕಿ, ಸಂಗಪ್ಪ ತವಡಿ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಪ್ರೊ.ಎಸ್.ಬಿ. ಬಿರಾದಾರ್ ಇತರರಿದ್ದರು.
ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತಾಡಿದರು. ಡಾ.ಅಬ್ದುಲ್ ಖದೀರ್ ಸ್ವಾಗತಿಸಿದರು. ಸಂಜೀವಕುಮಾರ ಜುಮ್ಮಾ ನಿರೂಪಣೆ ಮಾಡಿದರು. ಡಾ.ರಾಜಕುಮಾರ ಹೆಬ್ಬಾಳೆ ವಂದಿಸಿದರು.

ಕಕ ಭಾಗಕ್ಕೆ ರೂ. 5 ಸಾವಿರ ಕೋಟಿ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರ 3000 ಕೋಟಿ ರೂ. ನೀಡಿದ್ದಾಗಿ ಹೇಳಿದೆ. ಆದರೆ ಖರ್ಚಾಗಿದ್ದು ಕೇವಲ ಶೇ.24 ಅನುದಾನ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ನಮ್ಮ ಸರ್ಕಾರ ಈ ಭಾಗಕ್ಕೆ 5 ಸಾವಿರ ಕೋಟಿ ರೂ. ನೀಡಲಿದೆ. ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವುದು ಸೇರಿ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ನಿಗದಿತ ಅನುದಾನ ಖರ್ಚು ಮಾಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net