ಅಭಿವೃದ್ಧಿ ಕೇಂದ್ರದ ಉದ್ಘಾಟನೆ ಏ.೨೬ ರಂದು

ummath 1 pm
Published on

ಮಡಿಕೇರಿ: ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏ.೨೬ ರಂದು ಮಡಿಕೇರಿಯಲ್ಲಿ ನಮ್ಮ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಉಮ್ಮತ್ ಒನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಬಶೀರ್ ತಿಳಿಸಿದರು.

ಶನಿವಾರ ಬೆಳಿಗ್ಗೆ ನಗರದ ಮಹದೇವ ಪೇಟೆಯಲ್ಲಿಯಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ನಂತರ ೧೦.೩೦ ಗಂಟೆಗೆ ಕಾವೇರಿ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಕಣಚೂರು ಗ್ರೂಫ್ ಆಫ್ ಇಂಡಸ್ಟ್ರಿಸ್‌ನ ಅಧ್ಯಕ್ಷ ಡಾ.ಯು.ಕೆ.ಮೋನುಹಾಜಿ, ದಕ್ಷಿಣ ಕನ್ನಡ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಭಾರಧಿಯಾರ್ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ರಾಶೀದ್ ಗಝಾಲಿ, ಪುಣೆಯ ಅನಿಶ್ ಡಿಫೆನ್ಸ್ ಕ್ಯಾರಿಯರ್ ಇನ್ಸಿಟ್ಯೂಟ್‌ನ ಸ್ಥಾಪಕ ನಿರ್ದೇಶಕ ಅನಿಸ್ ಕುಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿಕ್ಷಣ, ಉದ್ಯೋಗ ಮತ್ತು ಸಂಶೋಧನೆಯ ಮೂಲಕ ಮುಸ್ಲಿಂ ಸಮಾಜವನ್ನು ಸಬಲೀಕರಣಗೊಳಿಸುವ ನಮ್ಮ ಪ್ರಯಾಣದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದ್ದು, ಇದರ ಮೂಲಕ ಪುಟ್ಟ ಜಿಲ್ಲೆ ಕೊಡಗಿನಲ್ಲೂ ಶೈಕ್ಷಣಿಕ ಕ್ರಾಂತಿಯನ್ನು ಪ್ರಾರಂಭಿಸುವ ಕನಸನ್ನು ನಾವು ಕಾಣುತ್ತಿದ್ದೇವೆ. ಸುಮಾರು ಆರು ವರ್ಷಗಳಿಂದ ಜಿಲ್ಲೆಯ ಎಲ್ಲಾ ಸಮುದಾಯದ ಅದರಲ್ಲೂ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳ ಶಿಕ್ಷಣ, ಯುವ ಪೀಳಿಗೆಯ ಉದ್ಯೋಗ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ಉಮ್ಮತ್ ಒನ್ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸಂಸ್ಥೆಯು ತನ್ನ ಕಾರ್ಯಚಟುವಟಿಕೆಯನ್ನು ಕೇಂದ್ರಿಕರಿಸುವ ಉದ್ದೇಶದಿಂದ ಎಲ್ಲರಿಗೂ ಪ್ರಯೋಜನ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಮ್ಯೂನಿಟಿ ರಿಸರ್ಚ್ ಆಂಡ್ ಡೆವಲೆಪ್‌ಮೆಂಟ್ ಸೆಂಟರನ್ನು ಸ್ಥಾಪಿಸಿದೆ ಎಂದು ಎಂ.ಬಿ.ಬಶೀರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಖಾಲಿದ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಫೈಝಿ, ಟ್ರಸ್ಟಿಗಳಾದ ಎಂ.ಯು.ಅಬ್ದುಲ್ ಮಜೀದ್, ಕೆ.ಎಂ.ಹನೀಫ್ ಹಾಗೂ ಒ.ಹೆಚ್.ಸಿದ್ಧಿಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net